Advertisement

8 ವರ್ಷಗಳ ಹರ್ಷ : ದೇಶ ಮತ್ತಷ್ಟು ಅಭಿವೃದ್ಧಿಯಾಗಲಿ

01:16 AM May 30, 2022 | Team Udayavani |

ಸೋಮವಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರಕಾರಕ್ಕೆ ಮೂರು ವರ್ಷ ಹಾಗೂ ಒಟ್ಟಾರೆಯಾಗಿ ಎಂಟು ವರ್ಷಗಳು ತುಂಬಲಿವೆ. 2014ರಲ್ಲಿ ಅಭೂತಪೂರ್ವವಾಗಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ, ಮೋದಿ ಅವರು ಎರಡನೇ ಅವಧಿಯಲ್ಲಿಯೂ ಅದಕ್ಕಿಂತ ಹೆಚ್ಚು ಸ್ಥಾನ ಪಡೆದು ಪುನಾರಾಯ್ಕೆಯಾಗಿದ್ದರು.

Advertisement

ಕಳೆದ ಎಂಟು ವರ್ಷಗಳಿಂದಲೂ ಸ್ಥಿರ ಸರಕಾರ ಕೊಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಯಶಸ್ವಿಯಾಗಿದೆ. 1991ರ ಅನಂತರ ದೇಶದಲ್ಲಿ ಇದ್ದ ಸಮ್ಮಿಶ್ರ ಸರಕಾರದ ಗೊಂದಲಗಳಿಗೆ ಇತಿಶ್ರೀ ಹಾಡಿದ್ದು 2014ರಲ್ಲಿ ಆಯ್ಕೆಯಾದ ಎನ್‌ಡಿಎ ಸರಕಾರ. ಈ ಚುನಾವಣೆಯಲ್ಲಿ ಬಿಜೆಪಿಯೇ ಬಹುಮತಕ್ಕೆ ಬೇಕಾದ ಸ್ಥಾನ ಪಡೆದಿತ್ತು ಎಂಬುದು ಬೇರೆ ವಿಚಾರ. ಹಾಗೆಯೇ 2019ರಲ್ಲಿಯೂ ಬಿಜೆಪಿಯೇ ಸ್ವತಂತ್ರವಾಗಿ ಅಧಿಕಾರಕ್ಕೇರುವಷ್ಟು ಸ್ಥಾನಗಳಲ್ಲಿ ಗೆದ್ದಿತ್ತು.

ಸ್ವತಂತ್ರವಾದ ಸರಕಾರ ರಚನೆಗೆ ಬೇಕಾದ ಸ್ಥಾನಗಳನ್ನು ಹೊಂದಿದ್ದರೂ, ಈಗಲೂ ಕೇಂದ್ರದಲ್ಲಿನ ಎನ್‌ಡಿಎ ಸರಕಾರ ಮೈತ್ರಿಧರ್ಮ ಪಾಲನೆ ಮಾಡಿಕೊಂಡು ಎನ್‌ಡಿಎ ಹೆಸರಿನಲ್ಲಿಯೇ ಅಧಿಕಾರ ನಡೆಸುತ್ತಿದೆ. ಜತೆಗೆ, ಸ್ವತ್ಛಭಾರತ ಯೋಜನೆಯಿಂದ ಹಿಡಿದು, ಇತ್ತೀಚಿನ ರಸಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ನೀಡುವ ಕುರಿತ ನಿರ್ಧಾರ ಜನಸಾಮಾನ್ಯರ ಉಪಯೋಗಕ್ಕಾಗಿ ತೆಗೆದುಕೊಂಡಂಥವುಗಳೇ ಆಗಿವೆ. ಅದರಲ್ಲೂ ಈಗ ಮುಂಗಾರು ಆರಂಭದ ಹೊತ್ತಿನಲ್ಲೇ ರಸಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ನೀಡಲು ಹೊರಟಿರುವುದು ರೈತಾಪಿ ವರ್ಗಕ್ಕೆ ಅನುಕೂಲವಾಗುವ ನಿರ್ಧಾರ.

2014ರ ಮೊದಲ ಅವಧಿಯ ಸರಕಾರಕ್ಕಿಂತ 2019ರಲ್ಲಿ ರಚನೆಯಾದ ಎರಡನೇ ಅವಧಿಯ ಸರಕಾರ ಎದುರಿಸಿದ ಸವಾಲುಗಳು ಹೆಚ್ಚು. ಅಧಿಕಾರಕ್ಕೇರಿದ ಏಳೆಂಟು ತಿಂಗಳಲ್ಲಿ ಇಡೀ ಜಗತ್ತು ಕೊರೊನಾದ ಪಾಶಕ್ಕೆ ಸಿಕ್ಕಿ ಒದ್ದಾಡಿತು. ಕೊರೊನಾದಿಂದ ಪಾರಾಗಲು ಸಣ್ಣಪುಟ್ಟ ರಾಷ್ಟ್ರಗಳೂ ಪರದಾಡಿದವು. ಆದರೆ, ಇಲ್ಲಿಯೂ ಕೊರೊನಾ ಆರಂಭದ ದಿನಗಳು, ಅಂದರೆ, ಲಾಕ್‌ಡೌನ್‌ ಘೋಷಿಸಿದ ವೇಳೆಯಲ್ಲಿ ಜನರ ಸಾಮೂಹಿಕ ವಲಸೆ ಒಂದಷ್ಟು ಸಮಸ್ಯೆಗೆ ಕಾರಣವಾಯಿತಾದರೂ ಅನಂತರದಲ್ಲಿ ಕೊರೊನಾ ನಿಯಂತ್ರಣ ವಿಚಾರದಲ್ಲಿ ತೆಗೆದುಕೊಂಡ ಕ್ರಮಗಳು ಮಾತ್ರ ಉತ್ತಮವಾಗಿದ್ದವು. ಅದರಲ್ಲೂ ಅತ್ಯಂತ ಕಡಿಮೆ ಅವಧಿಯಲ್ಲಿ ಲಸಿಕೆ ಕಂಡುಹಿಡಿದು, ಇದನ್ನು ಭಾರತದಲ್ಲೇ ಉತ್ಪಾದಿಸಿ ಎಲ್ಲರಿಗೂ ಕೊಟ್ಟಿದ್ದು ಮಾತ್ರ ಗಮನಾರ್ಹ.

ಅಷ್ಟೇ ಅಲ್ಲ, ಕೊರೊನಾ ಆರಂಭದಲ್ಲಿ ದೇಶದಲ್ಲಿ ಎಲ್ಲಿಯೂ ಪಿಪಿಇ ಕಿಟ್‌ ಇರಲಿಲ್ಲ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳು ಇರಲಿಲ್ಲ. ಅಲ್ಲದೆ ಆಮ್ಲಜನಕದ ಅವ್ಯವಸ್ಥೆಯು ಎರಡನೇ ಅಲೆ ವೇಳೆ ಕಾಡಿತು. ಆದರೂ, ಭಾರತದಂಥ ಅಪಾರ ಪ್ರಮಾಣದ ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಆರೋಗ್ಯ ಕೈಗೆಟಕುವಂತೆ ಮಾಡಿದ್ದು ಮತ್ತು  ಮೂಲಸೌಕರ್ಯಗಳ ವ್ಯವಸ್ಥೆ ಮಾಡಿದ್ದು ಹೆಗ್ಗಳಿಕೆಯೇ ಸರಿ.

Advertisement

ಕೊರೊನಾ ಇನ್ನೂ ಹೋಗಿಲ್ಲ. ಇದರ ನಡುವೆಯೇ ಇಡೀ ಜಗತ್ತು ಜೀವಿಸುತ್ತಿದೆ. ಸರಿದಾರಿಯಿಂದ ಪಕ್ಕಕ್ಕೆ ಜರಗಿದ್ದ ಆರ್ಥಿಕತೆ, ನಿಧಾನಕ್ಕೆ ಚೇತರಿಕೆಯಾಗುತ್ತಿದೆ. ಆದರೆ ಇನ್ನೂ ಕೊರೊನಾ ಸಮಸ್ಯೆಗಳು ಇವೆ. ಹೀಗಾಗಿ ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಇತ್ಯರ್ಥ, ಕೊರೊನಾದಿಂದಾಗಿ ನಷ್ಟಕ್ಕೀಡಾದವರಿಗೆ ಬದುಕು ಕಟ್ಟಿಕೊಡುವುದು ಸೇರಿದಂತೆ ಪ್ರಮುಖವಾದ ಕೆಲಸಗಳನ್ನು ಮಾಡಬೇಕಾಗಿದೆ. ಇದರಲ್ಲಿ ಯಶಸ್ವಿ­­ಯಾಗಲಿ ಎಂದು ಈ ಸಂದರ್ಭದಲ್ಲಿ ಹೇಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next