ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಿಂದ ಕಲಾ ವಿಭಾಗದಲ್ಲಿ 8 ಕೋರ್ಸ್‌ಗಳನ್ನು ಆರಂಭಿಸಿದೆ. ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆಗೂ ಪೂರ್ವದಲ್ಲಿ ಸೆಂಟ್ರಲ್ ಕಾಲೇಜು ಆವರಣದಲ್ಲಿ ವಾಣಿಜ್ಯ ಮತ್ತು ನಿರ್ವಾಹಣ ಶಾಸ್ತ್ರ ಹಾಗೂ ವಿಜ್ಞಾನ ವಿಭಾಗದ ಕೋರ್ಸ್‌ಗಳು ಮಾತ್ರ ಇದ್ದವು. ಕಲಾ ವಿಭಾಗದ ಎಲ್ಲ ಕೋರ್ಸ್‌ಗಳು ಜ್ಞಾನಭಾರತಿ ಆವಣದಲ್ಲೇ ನಡೆಯುತಿತ್ತು.
ತ್ರಿಭಜನೆಯ ನಂತರ ಹುಟ್ಟಿಕೊಂಡಿರುವ ಬೆಂಗಳೂರು ಕೇಂದ್ರ ವಿವಿ ಪ್ರಸಕ್ತ ಸಾಲಿನಿಂದ ಕಲಾ ವಿಭಾಗ ತೆರೆಯಲು ನಿರ್ಧರಿಸಿದ್ದು, ವಿದ್ಯಾರ್ಥಿಗಳಿಗೆ 8 ಕೋರ್ಸ್‌ಗಳ ಬೋಧನೆ ಮಾಡಲಿದೆ. ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರದ ಹಲವು ಅನೇಕ ವರ್ಷದಿಂದ ನಡೆಯುತ್ತಿದೆ. ಜೀವರಾಸಾಯನಿಕ, ಗಣಿತ, ಅನ್ವಯಿಕ ವಿಜ್ಞಾನ ಮತ್ತು ವಿದೇಶಿ ಭಾಷೆಗಳ ವಿಭಾಗವೂ ನಡೆಯುತಿತ್ತು.
ಈ ವರ್ಷ ಕಲಾ ವಿಭಾಗ ತೆರೆಯಲಾಗಿದ್ದು, ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಮನಶಾಸ್ತ್ರ ಹಾಗೂ ಸಮಾಜ ಕಾರ್ಯ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಈ ವರ್ಷದಿಂದ ನೀಡಲಾಗುತ್ತಿದೆ ಎಂದು ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಎಸ್.ಜಾಫೆಟ್ ಹೇಳಿದರು.
ಕಲಾ ವಿಭಾಗದ ಕೋರ್ಸ್‌ಗಳಿಗೆ ಸಾಕಷ್ಟು ಅರ್ಜಿ ಸಲ್ಲಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕೆಲವು ಪ್ರಾಧ್ಯಾಪಕರ ಸೇವೆಯನ್ನು ನಿಯೋಜನೆಯ ಆಧಾರದಲ್ಲಿ ಪಡೆಯಲಿದ್ದೇವೆ. ಇದರ ಜತೆಗೆ ಇತ್ತೀಚಿಗೆ ನಿವೃತ್ತಿ ಹೊಂದಿರುವ ಪ್ರಾಧ್ಯಾಪಕರನ್ನು ಹಾಗೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಿದ್ದೇವೆ ಎಂದು ವಿವರಿಸಿದರು.
ಬೆಂಗಳೂರು ಕೇಂದ್ರ ವಿವಿ ವ್ಯಾಪ್ತಿಯಲ್ಲಿ 220ಕ್ಕೂ ಅಧಿಕ ಕಾಲೇಜುಗಳು ಬರುತ್ತವೆ. ಈ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಬೆಂಗಳೂರು ವಿವಿಗೂ ಅರ್ಜಿ ಸಲ್ಲಿಸಬಹುದು ಎಂದು ಬೆಂವಿವಿ ಅಧಿಕಾರಿಗಳು ನೀಡಿದ್ದ ಹೇಳಿಕೆಯಿಂದ ಕೇಂದ್ರ ವಿವಿಗೆ ವಿದ್ಯಾರ್ಥಿಗಳ ಅರ್ಜಿ ಸ್ವಲ್ಪ ಕಡಿಮೆಯಾಗಿದೆ. ಆದರೆ, ಬಂದಿರುವ ವಿದ್ಯಾರ್ಥಿಗಳಿಗೆ ಜವಾಬ್ದಾರಿಯುತವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು ಹೇಳಿದರು.
ಪತ್ರಿಕೋದ್ಯಮ ವಿಭಾಗ ಸದ್ಯ ತೆರೆಯಲು ಬೇಕಾದ ವ್ಯವಸ್ಥೆ ಇಲ್ಲ. ಸ್ಟುಡಿಯೋ, ಕ್ಯಾಮೆರಾ, ಕಂಪ್ಯೂಟರ್ ಸಹಿತವಾದ ಎಲ್ಲ ವ್ಯವಸ್ಥೆ ಮಾಡಿಕೊಂಡೇ ಪತ್ರಿಕೋದ್ಯಮ ವಿಭಾಗ ಆರಂಭಿಸುತ್ತೇವೆ. ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚನೆ ಮಾಡಲಿದ್ದೇವೆ. ತಜ್ಞರ ಸಮಿತಿ ನೀಡುವ ಶಿಫಾರಸಿನ ಆಧಾರದಲ್ಲಿ ಉತ್ಕೃಷ್ಟ ತಂತ್ರಜ್ಞಾನ ಹಾಗೂ ಸೌಲಭ್ಯ ಹೊಂದಿರುವ ಪತ್ರಿಕೋದ್ಯಮ ಕೋರ್ಸ್ ತೆರೆಯಲಿದ್ದೇವೆ ಎಂದು ಮಾಹಿತಿ ನೀಡಿದರು.