Advertisement

ದಿ.ಚಂದು ಬಾಬು‌ ಪ್ರಶಸ್ತಿ ಪ್ರದಾನ: ಶಿರಸಿಯಲ್ಲಿ ಎಂಟು ದಿನ ‘ಶ್ರೀಕೃಷ್ಣಾಷ್ಟಕ’ತಾಳಮದ್ದಲೆ

04:10 PM Jul 23, 2022 | Team Udayavani |

ಶಿರಸಿ: ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್ ಪ್ರತೀ ವರ್ಷ ಹಮ್ಮಿಕೊಳ್ಳುವ ತಾಳ ಮದ್ದಲೆ‌ ಸಪ್ತಾಹ  ಈ ಬಾರಿ ಎಂಟು ದಿನಗಳ‌ ಕಾಲ ನಡೆಯಲಿದೆ. ಶ್ರೀ ಕೃಷ್ಣನ ಕಥಾ ಹಂದರದ ಕಥೆಗಳನ್ನೇ ಆಯ್ದುಕೊಂಡು ‘ಶ್ರೀಕೃಷ್ಣಾಷ್ಟಕ’ ತಾಳಮದ್ದಲೆಗಳನ್ನು ಆಗಸ್ಟ್ 6 ರಿಂದ 13 ರ ತನಕ‌ ನಿತ್ಯ ಸಂಜೆ 4 ರಿಂದ ಹಮ್ಮಿಕೊಳ್ಳಲಾಗಿದೆ.

Advertisement

ವಿಷಯ ತಿಳಿಸಿದ ಯಕ್ಷ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ, ಎಂಟು‌ ದಿನಗಳ ಕಾಲ ನಡೆಯುವ ತಾಳಮದ್ದಲೆ ನಗರದ ಟಿಎಂಎಸ್ ಸಭಾಂಗಣದಲ್ಲಿ ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಸಹಕಾರದಲ್ಲಿ ಏರ್ಪಡಿಸಲಾಗಿದೆ‌. ದಕ್ಷಿಣೋತ್ತರ ಕನ್ನಡ ಜಿಲ್ಲೆಯ‌‌ ಪ್ರಸಿದ್ಧ ಸುಮಾರು 40 ಕ್ಕೂ ಅಧಿಕ ಕಲಾವಿದರು, ಪ್ರತಿ ವರ್ಷದಂತೆ ತೆಂಕು ಬಡಗಿನ ಸಮ್ಮಿಲನ ಇಲ್ಲಾಗಲಿದೆ ಎಂದು ತಿಳಿಸಿದ್ದಾರೆ.

ಶ್ರೀಕೃಷ್ಣ ಜನ್ಮದಿಂದ ಎಂಟೂ‌ ದಿನಗಳಲ್ಲಿ ತಾಳಮದ್ದಲೆ ‌ಶ್ರೀಕೃಷ್ಣ ಜನ್ಮದಿಂದ ಶ್ರೀಕೃಷ್ಣನುಗ್ರಹದ ತನಕ ನಡೆಯಲಿದೆ. ಪ್ರಥಮ ದಿನ ಆ.6 ರಂದು ಪಾರ್ತಿಸುಬ್ಬ, ಮಟ್ಟಿವಾಸುದೇವ ರಚನೆಯ ಶ್ರೀಕೃಷ್ಣಾವತಾರ ಕಂಸವಧೆ, 7 ರಂದು ವಿಷ್ಣು ಭಟ್ಟ ಕಿರಿಕ್ಕಾಡರ ಪಾಂಚಜನ್ಯ, 8 ರಂದು ಬಲಿಪ ನಾರಾಯಣ ಭಾಗವತರ ರುಕ್ಮಿಣೀ ಸ್ವಯಂವರ, ಆ.9 ರಂದು ಪಾರ್ತಿಸುಬ್ಬ, ಹಲಸಿನಳ್ಳಿ ನರಸಿಂಹ ಶಾಸ್ತ್ರಿಗಳ ಪಾರಿಜಾತಾಪಹರಣ ನಡೆಯಲಿದೆ.

ಆ.10 ರಂದು ಅಜ್ಞಾತ ಕವಿಯ ಅಗ್ರಪೂಜೆ, 11 ರಂದು ಹಳೆಮಕ್ಕಿ ರಾಮ, ಸಂಕಯ್ಯ ಭಾಗವರ ಸತ್ವ ಪರೀಕ್ಷೆ, 12 ರಂದು‌ ದೇವಿದಾಸರ ಶ್ರೀಕೃಷ್ಣ ಸಾರಥ್ಯ, 13 ರಂದು ಹಲಸಿನಳ್ಳಿ ಹಾಗೂ ದೇವಿದಾಸರ ರಚನೆಯ ಶ್ರೀಕೃಷ್ಣಾನುಗ್ರಹ ತಾಳಮದ್ದಲೆಗಳು ನಡೆಯಲಿದೆ. ಈ ಬಾರಿಯ ತಾಳ ಮದ್ದಲೆ ಶ್ರೀಕೃಷ್ಣನ ಕಥಾ ಸುತ್ತವೆ ಮಾತಿನ ಮಂಟಪವಾಗಿ ಬಿಚ್ಚಿಕೊಳ್ಳಲಿದೆ.

ಒಂದೇ ವೇದಿಕೆ, 40 ಕಲಾವಿದರು!

Advertisement

ವೇದಿಕೆ ಒಂದೇ ಆದರೆ ಎಂಟು ದಿನಗಳಲ್ಲಿ ನಾಡಿನ ಹೆಸರಾಂತ‌ ಕಲಾವಿದರು, ತಾಳಮದ್ದಲೆ ಅರ್ಥದಾರಿಗಳು ವೇದಿಕೆ ಹಂಚಿಕೊಳ್ಳಲಿದ್ದಾರೆ. ಭಾಗವತರಾದ ಕೇಶವ ಹೆಗಡೆ‌ ಕೊಳಗಿ, ರಾಮಕೃಷ್ಣ ಹಿಲ್ಲೂರು, ರಾಘವೇಂದ್ರ ಜನ್ಸಾಲೆ, ಗಣಪತಿ ಭಟ್ಟ, ಅನಂತ ದಂತಳಿಕೆ, ರವಿಚಂದ್ರ‌ ಕನ್ನಡಿಕಟ್ಟೆ, ಮದ್ದಲೆ ವಾದಕರಾದ ಶಂಕರ ಭಾಗವತ, ಎ.ಪಿ.ಪಾಠಕ, ನರಸಿಂಹ ಭಟ್ಟ ಹಂಡ್ರಮನೆ, ಅನಿರುದ್ಧ ಹೆಗಡೆ, ಚೈತನ್ಯ ಪದ್ಯಾಣ, ಚಂಡೆಯಲ್ಲಿ ಭಾರ್ಗವ ಹೆಗ್ಗೋಡು, ವಿಘ್ನೇಶ್ವರ ಗೌಡ, ಪ್ರಸನ್ನ ಭಟ್ ಹೆಗ್ಗಾರು ಪಾಲ್ಗೊಳ್ಳುವರು.

ಅರ್ಥದಾರಿಗಳಾಗಿ ವಿದ್ಯಾ ವಾಚಸ್ಪತಿ ಉಮಾಕಾಂತ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವ ರಂಗಾ ಭಟ್ಟ, ವಿ.ಗಣಪತಿ ಭಟ್ಟ ಸಂಕದಗುಂಡಿ, ಅಶೋಕ ಭಟ್ಟ ಸಿದ್ದಾಪುರ, ವಿ.ರವಿಶಂಕರ ದೊಡ್ನಳ್ಳಿ, ರಾಧಾಕೃಷ್ಣ‌ ಕಲ್ಚಾರ್, ವಿ. ರಾಮಚಂದ್ರ ಭಟ್ಟ, ವಿ.ಬಾಲಚಂದ್ರ ಭಟ್ಟ, ವಿ.ವಿನಾಯಕ ಭಟ್ಟ, ಡಿ.ಕೆ.ಗಾಂವಕರ್, ಮಂಜುನಾಥ ಗೊರಮನೆ, ಎಂ.ವಿ.ಹೆಗಡೆ ಅಮಚಿಮನೆ, ಜಬ್ಬಾರ ಸುಮೋ, ದಿವಾಕರ ಕೆರೆಹೊಂಡ, ವಾದಿರಾಜ ಕಲ್ಲೂರಾಯ, ಸುಬ್ರಾಯ ಕೆರೆಕೊಪ್ಪ, ಎಂ.ಎನ್.ಹೆಗಡೆ ಹಲವಳ್ಳಿ, ಹರೀಶ ಬೊಳಂತಿಮೊಗರು, ಪ್ರದೀಪ ಸಾಮಗ, ಶ್ರೀಧರ ಚಪ್ಪರಮನೆ,ವಿ.ಮಹೇಶ ಭಟ್ಟ, ಗಣೇಶ ಸುಂಕಸಾಳ, ವಿ.ಹಿರಣ್ಯ ವೆಂಕಟೇಶ ಭಟ್ಟ, ಡಾ.ಜಿ.ಎಲ್.ಹೆಗಡೆ ಕುಮಟಾ ಪಾಲ್ಗೊಳ್ಳುವರು.

ಪ್ರಶಸ್ತಿ‌ ಪ್ರದಾನ

ಆ.6 ರಂದು‌ ಸಂಜೆ 4 ಕ್ಕೆ ಶ್ರೀಕೃಷ್ಣಾಷ್ಟಕ ತಾಳಮದ್ದಲೆ ಸರಣಿ‌ ಆರಂಭವಾಗಲಿದ್ದು, ದೇಶದ ಪ್ರಸಿದ್ಧ ಕಲಾವಿದ ವಿನಯ ಹೆಗಡೆ ಗಡೀಕೈ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಟ್ರಸ್ಟನ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ ವಹಿಸಿಕೊಳ್ಳುವರು. ಅತಿಥಿಗಳಾಗಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಪಾಲ್ಗೊಳ್ಳುವರು. ದಿ.ಚಂದುಬಾಬು‌ ಪ್ರಶಸ್ತಿ ಕೂಡ ಇದೇ ವೇದಿಕೆಯಲ್ಲಿ ಪ್ರದಾನ ಆಗಲಿದ್ದು ತಾಳಮದ್ದಲೆ, ಯಕ್ಷಗಾನದ ಸಂಗ್ರಾಹಕ ಶ್ರೀಕಾಂತ ಹೆಗಡೆ ಪೇಟೇಸರ ಅವರು ಸ್ವೀಕರಿಸಲಿದ್ದಾರೆ.

ಸಮಾರೋಪ‌ ಸಮಾರಂಭ ಆ.13 ರಂದು ಸಂಜೆ6:30 ಕ್ಕೆ ನಡೆಯಲಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅತಿಥಿಗಳಾಗಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು‌ ಕೇಶವ ಹೆಗಡೆ ವಹಿಸಿ ಕೊಳ್ಳಲಿದ್ದಾರೆ‌ ಎಂದು ಕೋಶಾಧ್ಯಕ್ಷ ಸೀತಾರಾಮ ಚಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next