Advertisement

8 ಕೋ.ರೂ. ಕಾಮಗಾರಿ: ಸಚಿವ ಪ್ರಮೋದ್‌ ಚಾಲನೆ

06:00 AM Feb 08, 2018 | |

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ 35  ವಾರ್ಡ್‌ಗಳ ಪೈಕಿ 19 ವಾರ್ಡ್‌ಗಳಲ್ಲಿ ಒಟ್ಟು 8 ಕೋ.ರೂ. ವೆಚ್ಚದ 48 ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ಶಿಲಾನ್ಯಾಸವನ್ನು ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಬುಧವಾರ ನೆರವೇರಿಸಿದರು.

Advertisement

ಬೆಳಗ್ಗಿನಿಂದ ಸಂಜೆಯವರೆಗೂ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಸಚಿವರು ಗೋಪಾಲಪುರ ವಾರ್ಡ್‌ನಲ್ಲಿ 1.5 ಕೋ.ರೂ. ವೆಚ್ಚದ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ತನ್ನ ಕಾರ್ಯಕ್ರಮಗಳ ಉದ್ಘಾಟನೆ/ಶಿಲಾನ್ಯಾಸ ಸರಣಿಗೆ ಚಾಲನೆ ನೀಡಿದರು. ನೂತನ ಕಾಂಕ್ರೀಟ್‌ ರಸ್ತೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳು ಹೆಚ್ಚಾಗಿದ್ದವು. ಸಂತೆಕಟ್ಟೆಯಲ್ಲಿ 1 ಎಕರೆ ಜಾಗದಲ್ಲಿ 1 ಕೋ.ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ, ಕರಾವಳಿ ಬೈಪಾಸ್‌ನಲ್ಲಿ ಒಣ, ಗೃಹೋಪಯೋಗಿ, ಅಪಾಯಕಾರಿ ಮತ್ತು ಎಲೆಕ್ಟ್ರಾನಿಕ್‌ ತ್ಯಾಜ್ಯ ಸಂಗ್ರಹಣ ಕೇಂದ್ರ ಉದ್ಘಾಟನೆ ಮೊದಲಾದವು ಪ್ರಮುಖ ಕಾಮಗಾರಿಗಳಾಗಿದ್ದವು.

10 ಕೋ.ರೂ. ಬಿಡುಗಡೆ
ಉದ್ಘಾಟನ ಕಾರ್ಯಕ್ರಮದ ಅನಂತರ ಪತ್ರಿಕಾಗೋಷ್ಠಿಯಲ್ಲಿ ಸಚಿವ ಪ್ರಮೋದ್‌ ಮಾತನಾಡಿ, “ಮುಖ್ಯಮಂತ್ರಿಯವರು ಉಡುಪಿ ನಗರಕ್ಕೆ ವಿಶೇಷವಾಗಿ ಬಿಡುಗಡೆ ಗೊಳಿಸಿದ 10 ಕೋ.ರೂ. ಅನು ದಾನ ದಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನಡೆಸಲಾಗುತ್ತಿದೆ. ಉಳಿದ 16 ವಾರ್ಡ್‌ ಗಳಲ್ಲಿ ಉದ್ಘಾಟನೆ ಶೀಘ್ರ ನಡೆಯಲಿದೆ. ನಿಗದಿತ ಅವಧಿಯಲ್ಲಿಯೇ ಕಾಮ ಗಾರಿ ಗಳು ಪೂರ್ಣಗೊಳ್ಳಲಿವೆ. ಚುನಾವಣೆ ಅಥವಾ ಚುನಾವಣ ನೀತಿಸಂಹಿತೆಯನ್ನು ಗಮನ ದಲ್ಲಿಟ್ಟು ಕೊಂಡಿಲ್ಲ. ಜನರ ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಮೀನುಗಾರರಿಗೆ ಕೇಂದ್ರ ಸರಕಾರ ನೀಡುತ್ತಿದ್ದ ಸೀಮೆ ಎಣ್ಣೆ ಸಬ್ಸಿಡಿ ಸ್ಥಗಿತಗೊಳಿಸಿದೆ. ರಾಜ್ಯ ಮಾತ್ರ ತನ್ನ ನಿಗದಿತ ಕೋಟಾದ ಸೀಮೆ ಎಣ್ಣೆ ನೀಡುತ್ತಿದೆ’ ಎಂದು ಹೇಳಿದರು.  ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌ ಉಪಸ್ಥಿತರಿದ್ದರು.

ಮಠ ಸರಕಾರೀಕರಣ ಗೊತ್ತಿಲ್ಲ
ಮಠಗಳ ಸರಕಾರೀಕರಣ ಕುರಿತಾದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಧಾರ್ಮಿಕ ದತ್ತಿ ಕಾಯಿದೆ ಪುನಾರೂಪಿಸುವ ಕುರಿತು ಸುಪ್ರೀಂ ಕೋರ್ಟ್‌ ಸಲಹೆ ನೀಡಿತ್ತು. ಮಠಗಳ ಸರಕಾರೀಕರಣ ಸಂದರ್ಭ ಕಾನೂನು ಮತ್ತು ಜನರ ಭಾವನೆ ಎರಡಕ್ಕೂ ಆದ್ಯತೆ ನೀಡುವ ಅಗತ್ಯವಿದೆ’ ಎಂದು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next