ಹುಬ್ಬಳ್ಳಿ: ಏಪ್ರಿಲ್-ಮೇ ತಿಂಗಳ ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟಕ್ಕೆ ಜಾರಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮೊನ್ನೆಯ ಏಳು ದಿನಗಳ ಲಾಕ್ ಡೌನ್ ಗಾಯದ ಮೇಲೆ ಬರೆ ಎಳೆದಿದೆ. ಒಂದು ವಾರದಲ್ಲಿ ಬರೋಬ್ಬರಿ 8.50 ಕೋಟಿ ರೂ. ಆದಾಯ ನಷ್ಟವಾಗಿದೆ.
ಮೇ 19ರ ನಂತರ ಬಸ್ ಸಂಚಾರಕ್ಕೆ ಅನುಮತಿ ನೀಡಿದರೂ ಹಿಂದಿನ ಸಾರಿಗೆ ಆದಾಯದ ಶೇ.25ಕ್ಕೂ ತಲುಪಿರಲಿಲ್ಲ. ಆದರೆ ದಿನ ಕಳೆದಂತೆ ಸಾರಿಗೆ ಆದಾಯದಲ್ಲಿ ಕೊಂಚ ಚೇತರಿಕೆ ಕಂಡಿತ್ತಾದರೂ ಬೆಂಗಳೂರು, ಧಾರವಾಡ, ಮಂಗಳೂರು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾಡಳಿತಗಳು ಲಾಕ್ ಡೌನ್ ಘೋಷಿಸಿದ ಪರಿಣಾಮ ಬರುತ್ತಿದ್ದ ಒಂದಿಷ್ಟು ಆದಾಯವೂ ಖೋತಾ ಆಯಿತು. ರಾಜ್ಯದ ಐದಾರು ಜಿಲ್ಲೆಗಳಲ್ಲಿ ಘೋಷಿಸಿದ ಲಾಕ್‌ಡೌನ್ ಸಂಸ್ಥೆಯ ವ್ಯಾಪ್ತಿಯ 9 ವಿಭಾಗಗಳ ಮೇಲೂ ಪರಿಣಾಮ ಬೀರಿ ಸಾರಿಗೆ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.
ಹೆಚ್ಚಿನ ಸಾರಿಗೆ ಆದಾಯದ ಹೊಂದಿದ ಜಿಲ್ಲೆಗಳಾದ ಬೆಂಗಳೂರು ಹಾಗೂ ಧಾರವಾಡದಲ್ಲಿ ಲಾಕ್‌ಡೌನ್ ಘೋಷಿಸಿದ ಪರಿಣಾಮ ಸಂಸ್ಥೆಗೆ ದೊಡ್ಡ ಪ್ರಮಾಣದ ನಷ್ಟಕ್ಕೆ ಕಾರಣವಾಗಿದೆ. ಒಂದಿಷ್ಟು ಆದಾಯ ತರುವ ಪ್ರಮುಖ ನಗರಗಳು ಪುನಃ ಲಾಕ್‌ಡೌನ್‌ಗೆ ಒಳಗಾದ ಪರಿಣಾಮ ಸಂಸ್ಥೆಗೆ ಬರುತ್ತಿದ್ದ ಅಷ್ಟಿಷ್ಟು ಆದಾಯವೂ ಇಲ್ಲದಂತಾಗಿದೆ. ಇನ್ನೂ ಸಂಸ್ಥೆ ವ್ಯಾಪ್ತಿಗೆ ಒಳಪಡುವ ಕೆಲ ತಾಲೂಕುಗಳಲ್ಲಿ ಸ್ವಯಂ ಲಾಕ್‌ಡೌನ್‌ಗೆ ಜನರು ಮುಂದಾಗಿದ್ದರಿಂದ ನಷ್ಟದ ಪ್ರಮಾಣ ಹೆಚ್ಚಾಗಲು ಕಾರಣವಾಯಿತು. ಹೀಗಾಗಿ ಕೇವಲ ಏಳು ದಿನಗಳಲ್ಲಿ 9 ಸಾರಿಗೆ ವಿಭಾಗಗಳಿಂದ ಬರೋಬ್ಬರಿ 8.50 ಕೋಟಿ ರೂ. ನಷ್ಟವಾಗಿದೆ.
ಆದಾಯ ಖೋತಾ: ಆರಂಭಿಕ ಲಾಕ್‌ಡೌನ್ ನಂತರದಲ್ಲಿ ಒಂದಿಷ್ಟು ಚೇತರಿಕೆ ನಿರೀಕ್ಷೆ ಬೆನ್ನಲ್ಲೇ ಮತ್ತೆ ಲಾಕ್‌ಡೌನ್ ಘೋಷಿಸಿದ ಪರಿಣಾಮ ನಿತ್ಯ ಚೂರುಪಾರು ಬರುತ್ತಿದ್ದ 1.50 ಕೋಟಿ ರೂ. ಆದಾಯ ದಿಢೀರನೆ 29 ಲಕ್ಷ ರೂ.ಗೆ ಕುಸಿಯಲು ಕಾರಣವಾಯಿತು. ಏಳು ದಿನಗಳಲ್ಲಿ ಬರಬೇಕಾದ 10.50 ಕೋಟಿ ರೂ.ಗಳಲ್ಲಿ 9 ವಿಭಾಗಗಳಿಂದ ಬಂದಿದ್ದು ಕೇವಲ 2 ಕೋಟಿ ಮಾತ್ರ. ಇದರಿಂದಾಗಿ ಸಾಮಾನ್ಯ ದಿನಗಳಲ್ಲಿನ 5.50-6 ಕೋಟಿ ರೂ. ಆದಾಯಕ್ಕೆ ಹೋಲಿಸಿದರೆ ಏಳು ದಿನಕ್ಕೆ 38.50 ಕೋಟಿ ರೂ. ಆದಾಯ ಕುಸಿದಂತಾಗಿದೆ. ಸಾಕಷ್ಟು ಕಿಮೀ ರದ್ದು: ಸಾಮಾನ್ಯ ದಿನಗಳಲ್ಲಿ ಸಂಸ್ಥೆಯಲ್ಲಿ 4660 ಬಸ್‌ಗಳು ಸರಿಸುಮಾರು 16 ಲಕ್ಷ ಕಿಮೀ ಸಂಚರಿಸುತ್ತಿದ್ದವು. ಸರಕಾರದ ಲಾಕ್ ಡೌನ್ ತೆರವುಗೊಳಿಸಿದ ನಂತರ ನಿತ್ಯ 2700 ಬಸ್‌ಗಳು ಸುಮಾರು 7 ಲಕ್ಷ ಕಿಮೀ ಸಂಚಾರ ಮಾಡುತ್ತಿದ್ದವು. ಆದರೆ ಏಳು ದಿನದ ಲಾಕ್‌ಡೌನ್ ಸಮಯದಲ್ಲಿ ನಿತ್ಯ 850 ಬಸ್‌ಗಳು ಮಾತ್ರ ಕೇವಲ 1.70 ಲಕ್ಷ ಕಿಮೀ ಸಂಚಾರ ಮಾಡಿವೆ. ನೆರವಿನ ಹಸ್ತ ಅನಿವಾರ್ಯ: ಆರಂಭಿಕ ಹಂತದ ಲಾಕ್ ಡೌನ್ ಪರಿಣಾಮ ಬರೋಬ್ಬರಿ 56 ದಿನಗಳಲ್ಲಿ 9.31 ಕೋಟಿ ಕಿಮೀ ಬಸ್ ಸಂಚಾರ ರದ್ದಾಗಿ ಸಂಸ್ಥೆಗೆ 336 ಕೋಟಿ ರೂ. ಆದಾಯ ನಷ್ಟವಾಗಿತ್ತು. ಮೇ 19ರ ನಂತರ ರಾಜ್ಯದೊಳಗೆ ಬಸ್ ಕಾರ್ಯಾಚರಣೆಗೆ ಅವಕಾಶ ನೀಡಲಾಯಿತು. ಮಾರ್ಗಸೂಚಿಯಂತೆ ಸಾಮಾಜಿಕ ಅಂತರ, ನಿತ್ಯವೂ ಬಸ್‌ಗಳ ಸ್ಯಾನಿಟೈಸರ್ ಸಿಂಪರಣೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಸೋಂಕಿನ ಭಯದಿಂದ ಜನರು ಬಸ್ ಹತ್ತಲು ಹಿಂದೇಟು ಹಾಕಿದರು. ಆರ್ಥಿಕವಾಗಿ ಪ್ರಪಾತದಲ್ಲಿ ಸಿಲುಕಿರುವ ಸಂಸ್ಥೆಗೆ ಸರಕಾರ ನೆರವಿನ ಹಸ್ತ ಚಾಚಿದರೆ ಮಾತ್ರ ಮೇಲೇಳಲು ಸಾಧ್ಯ ಎನ್ನುವಂತಹ ಸ್ಥಿತಿಗೆ ತಲುಪಿದೆ.
ಪ್ರಮುಖ ಎರಡ್ಮೂರು ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡಿದರೂ ಸಂಸ್ಥೆಯ ಸಾರಿಗೆ ಆದಾಯದಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಕಳೆದ ಏಳು ದಿನಗಳ ಲಾಕ್‌ಡೌನ್‌ನಿಂದಾಗಿ ಸಂಸ್ಥೆಯ 9 ವಿಭಾಗಗಳ ಮೇಲೂ ಪರಿಣಾಮ ಬೀರಿದ್ದು, ಪ್ರಯಾಣಿಕರ ಕೊರತೆಯಿಂದ ಬಸ್‌ಗಳ ಸಂಚಾರ ಕೂಡ ಕುಸಿದಿದ್ದು, ಏಳು ದಿನಗಳಲ್ಲಿ ಸುಮಾರು 8.50 ಕೋಟಿ ರೂ. ಸಾರಿಗೆ ಆದಾಯ ನಷ್ಟವಾಗಿದೆ.
-ಎಚ್. ಸಂತೋಷಕುಮಾರ, ಮುಖ್ಯ ಸಂಚಾರ ವ್ಯವಸ್ಥಾಪಕ
-ಹೇಮರಡ್ಡಿ ಸೈದಾಪುರ