ಬೆಂಗಳೂರು: ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವುದು ಸೇರಿ ವಿವಿಧ ಬೇಡಿಕೆ
ಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಶುಕ್ರವಾರ ಸರಕಾರದ ಮುಖ್ಯ ಕಾರ್ಯ ದರ್ಶಿ ರಜನೀಶ್ ಗೋಯೆಲ್ ಅವರಿಗೆ ಮನವಿ ಸಲ್ಲಿಸಿತು.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗ, ಸರಕಾರ ಬೇಡಿಕೆ ಈಡೇರಿಕೆ ಮಾಡದೆ ಇದ್ದಲ್ಲಿ ಜು. 29ರಂದು ರಾಜ್ಯಾದ್ಯಂತ ಸರಕಾರಿ ನೌಕರರು ಅನಿರ್ದಿಷ್ಟಾವಧಿಯ ವರೆಗೆ ಕರ್ತವ್ಯಕ್ಕೆ ಗೈರಾಗಲಿದ್ದಾರೆ ಎಂದು ಮನವಿ ಸಲ್ಲಿಸಿ ಎಚ್ಚರಿಕೆ ನೀಡಿತು.
ಸರಕಾರಿ ನೌಕರರ ಬೇಡಿಕೆ ಈಡೇರಿಕೆ ಆಗ್ರಹಿಸಿ ಈಗಾಗಲೇ ಜಿಲ್ಲಾಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ. ಅದೇ ರೀತಿಯಲ್ಲಿ ಶುಕ್ರವಾರ ವಿಧಾನ ಸೌಧದ ಗಾಂಧಿಪ್ರತಿಮೆ ಎದುರು ಧರಣಿ ನಡೆಸಿ ಮನವಿ ಸಲ್ಲಿಸಲಾಗಿದೆ. ಸರಕಾರ ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದರು.
ಈ ಹಿಂದೆ ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರಕಾರ ಸಂಘದ ಬೇಡಿಕೆ ಈಡೇರಿಕೆ ಮಾಡದೆ ಇದ್ದಲ್ಲಿ ಜು.29ರಂದು ಅನಿರ್ದಿಷ್ಟ ಅವಧಿಗೆ ಕರ್ತವ್ಯಕ್ಕೆ ಗೈರಾಗುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಜು.23ರಂದು ರಾಜ್ಯದ ಎಲ್ಲ ಇಲಾಖೆಗಳ, ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾ ನಿಲಯ, ಸ್ಥಳೀಯ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳ ನೌಕರರ ವೃಂದ ಜತೆಗೆ ಸಭೆ ಕರೆದು ಅಂತಿಮ ನಿರ್ಧಾರಕ್ಕೆ ಬರಲಾಗುವುದು ತಿಳಿಸಿದರು.