ಸಿರುಗುಪ್ಪ: ನಗರದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದ ಅನುದಾನದೊಂದಿಗೆ ತೆರಿಗೆ ಸಂಗ್ರಹಣೆಗೂ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಮಂಡನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ನಗರದ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳಲ್ಲಿ ನಗರಸಭೆಗೆ ಅನುದಾನ ನೀಡುತ್ತಿದೆ. ತೆರಿಗೆ ಸಂಗ್ರಹ ಹಣದಲ್ಲಿ ನಗರಸಭೆ ಗುತ್ತಿಗೆ ನೌಕರರಿಗೆ ಹಾಗೂ ಇತರೆ ವೆಚ್ಚಗಳಿಗೆ ಸಾಕಾಗುವಷ್ಟು ತೆರಿಗೆ ಸಂಗ್ರಹಣೆ ಮಾಡಲು ಸದಸ್ಯರು ಮತ್ತು ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.
70 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರದಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ ನಂತರ ತೆರಿಗೆ ಹೆಚ್ಚಿಸಿ ನಗರದ ಅಭಿವೃದ್ಧಿಗೆ ಮುಂದಾಗಬೇಕು. ನಗರದಲ್ಲಿ ನೂತನ ಲೇಔಟ್ ಗಳ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಸದಸ್ಯರು ಹೆಚ್ಚಿನ ವಿಳಂಬ ನೀತಿ ಅನುಸರಿಸದೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಹೆಚ್ಚಿನ ತೆರಿಗೆ ಸಂಗ್ರಹಣೆ ಮಾಡಲು ಸಾಧ್ಯವಾಗಲಿದೆ ಎಂದರು.
ಈ ಕಚೇರಿಯಲ್ಲಿ ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದ್ದು, ಕಟ್ಟಡ ಪರವಾನಿಗೆ, ಫಾರಂ3 ಸೇರಿದಂತೆ ಇತರೆ ಕಾರ್ಯಗಳನ್ನು ತ್ವರಿತವಾಗಿ ಮಾಡಿದಾಗ ಮಾತ್ರ ನಗರಸಭೆಗೆ ಹೆಚ್ಚಿನ ಆದಾಯ ಬರಲು ಸಾಧ್ಯವಾಗುತ್ತದೆ ಎಂದರು.
ಪೌರಾಯುಕ್ತ ರಾಘವೇಂದ್ರ ಗುರು ಮಾತನಾಡಿ, ಕಚೇರಿಯಲ್ಲಿ ಯಾವುದೇ ರೀತಿಯಲ್ಲಿ ವಿಳಂಬ ನೀತಿ ಅನುಸರಿಸುತ್ತಿಲ್ಲ. ಆದರೆ ಅಗತ್ಯ ದಾಖಲೆಗಳನ್ನು ಒದಗಿಸದೆ ಇರುವುದರಿಂದ ವಿಳಂಬವಾಗಿರಬಹುದು, ಕಾನೂನಾತ್ಮಕವಾಗಿ ಸರಿ ಇರುವ ಯಾವುದೇ ಅರ್ಜಿಗಳನ್ನು ವಿಲೆವಾರಿ ಮಾಡಲು ವಿಳಂಬ ಮಾಡಿಲ್ಲವೆಂದು ಹೇಳಿದರು.
ಇದಕ್ಕೂ ಮೊದಲು ಪ್ರಸಕ್ತ ವರ್ಷದ ಆದಾಯ 522247755 ರೂ. ಇದ್ದರೆ, ವೆಚ್ಚ 266098753 ರೂ. ಗಳಿದ್ದು, 77,62,857 ರೂ.ಗಳ ಉಳಿತಾಯ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಪೌರಾಯುಕ್ತರು ವಿವರ ನೀಡಿದರು. ಅಧ್ಯಕ್ಷೆ ಕೆ.ಸುಶೀಲಮ್ಮ ಮತ್ತು ಸದಸ್ಯರು, ಅಧಿಕಾರಿಗಳು ಇದ್ದರು.