ಬೆಂಗಳೂರು: ನಗರದ ಸಂಚಾರ ಸಿಗ್ನಲ್ ಮತ್ತು ಮಾರುಕಟ್ಟೆ ಸೇರಿ ವಿವಿಧೆಡೆ ಭಿಕ್ಷಾಟನೆ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ 720 ಮಕ್ಕಳನ್ನು ಸಮೀಕ್ಷೆ ಮೂಲಕ ಬಿಬಿಎಂಪಿ ಗುರುತಿಸಲಾಗಿದೆ.
ಶಾಲೆಯಿಂದ ಹೊರಗುಳಿದು ಭಿಕ್ಷಾಟನೆ ಮಾಡುತ್ತಿರುವ ಮಕ್ಕಳು ಹಾಗೂ ಸಂಚಾರ ಸಿಗ್ನಲ್‌ಗಳ ಬಳಿ ವಸ್ತುಗಳ ಮಾರಾಟದಲ್ಲಿ ತೊಡಗಿರುವ ಮಕ್ಕಳ ಸಮೀಕ್ಷೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶದಂತೆ ಬಿಬಿಎಂಪಿ ಸಮೀಕ್ಷೆ ನಡೆಸಿದೆ. ಖಾಸಗಿ ಸಂಘ-ಸಂಸ್ಥೆಗಳು ಹಾಗೂ ನಿಮ್ಹಾನ್ಸ್ ಆಸ್ಪತ್ರೆ ಸಹಕಾರದೊಂದಿಗೆ ನಡೆಸಲಾದ ಸಮೀಕ್ಷೆಯಲ್ಲಿ ಭಿಕ್ಷಾಟನೆ ಮತ್ತು ಆಟಿಕೆಗಳನ್ನು ಮಾರಾಟ ಮಾಡುವ 720 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ.
ಈ ಕುರಿತು ವರದಿಯನ್ನು ಹೈಕೋರ್ಟ್‌ಗೆ ಬಿಬಿಎಂಪಿ ಸಲ್ಲಿಸಲಿದೆ. ಸಮೀಕ್ಷೆಯಲ್ಲಿ ಗುರುತಿಸಿದ ಮಕ್ಕಳಿಗೆ ಪೊಲೀಸ್, ಕಾರ್ಮಿಕ, ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಜಂಟಿ ಕಾರ್ಯಾಚರಣೆ ಮೂಲಕ ಸರ್ಕಾರೇತರ ಸಂಸ್ಥೆ (ಎನ್ ಜಿಒ)ಗಳೊಂದಿಗೆ ಪ್ರತ್ಯೇಕ ವಸತಿ ಮತ್ತು ಆರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮೊಬೈಲ್ ಶಾಲೆ ಮೂಲಕ ಶಿಕ್ಷಣ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳು ವಾಸವಾಗಿರುವ ಸ್ಥಳಗಳಲ್ಲಿಯೇ ಶಿಕ್ಷಣ ನೀಡುವ ಸಲುವಾಗಿ ಬಿಬಿಎಂಪಿ ಶಿಕ್ಷಣ ವಿಭಾಗ ದಿಂದ ಮನೆ ಬಾಗಿಲಿಗೆ ಶಾಲೆ ಯೋಜನೆ ಮೂಲಕ ಮೊಬೈಲ್ ಶಾಲೆ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಬಿಬಿಎಂಪಿ 10 ಬಿಎಂಟಿಸಿ ಬಸ್‌ಗಳನ್ನು ಪಡೆದು ಮೊಬೈಲ್ ಶಾಲೆಗಳನ್ನು ಮಾಡಲಾಗಿದೆ. ಪಾಲಿಕೆಯ ಸಹ ಶಿಕ್ಷಕರನ್ನು ಪಾಠ ಮಾಡಲು ನಿಯೋಜಿಸಲಾಗಿದೆ. ಶಿಕ್ಷಣ ದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಕನಿಷ್ಠ ಸಾಕ್ಷರತೆ ಮಟ್ಟವನ್ನು ಕಲಿಸುವ ಉದ್ದೇಶದಿಂದ ರಾತ್ರಿ ಶಾಲೆಯನ್ನೂ ಆರಂಭಿಸಲು ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿ ಭಿಕ್ಷಾಟನೆ ಮತ್ತು ಆಟಿಕೆ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ 720 ಮಕ್ಕಳನ್ನು ಸಮೀಕ್ಷೆ ಯಲ್ಲಿ ಗುರುತಿಸಲಾಗಿದೆ. ಈ ಮಕ್ಕಳಿಗೆ ಬಿಬಿಎಂಪಿಯಿಂದ ವಸತಿ ಹಾಗೂ ಶಿಕ್ಷಣ ವ್ಯವಸ್ಥೆ ಮಾಡಲಾಗಿದೆ.
–ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ