ನವದೆಹಲಿ:ದೇಶಕ್ಕೆ ಬ್ರಿಟೀಷರು ದಾಳಿ ನಡೆಸಿ, ಆಳ್ವಿಕೆ ಶುರು ಮಾಡುವುದಕ್ಕಿಂತ ಮೊದಲೇ ಇಲ್ಲಿನ ಒಟ್ಟು ಜನರ ಪೈಕಿ ಶೇ.70 ಮಂದಿ ಶಿಕ್ಷಣ ಪಡೆದಿದ್ದರು. ಆದರೆ, ಅವರ ಆಡಳಿತದ ಪರಿಣಾಮವಾಗಿ ಇಲ್ಲಿನ ಶಿಕ್ಷಣ ವ್ಯವಸ್ಥೆ ನಾಶವಾಯಿತು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಆರೋಪಿಸಿದ್ದಾರೆ.
ಕರ್ನಾಲ್‌ನಲ್ಲಿ ಆಸ್ಪತ್ರೆಯೊಂದರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟೀಷರು ದೇಶಕ್ಕೆ ದಾಳಿ ನಡೆಸಿ ಆಡಳಿತ ಶುರು ಮಾಡುವ ಮೊದಲು ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ.70 ಮಂದಿ ಶಿಕ್ಷಣ ಪಡೆದಿದ್ದರು.
ನಿರುದ್ಯೋಗದ ಸಮಸ್ಯೆಯೂ ಇರಲಿಲ್ಲ. ಆದರೆ, ಇದೇ ಅವಧಿಯಲ್ಲಿ ಇಂಗ್ಲೆಂಡ್‌ನಲ್ಲಿ ಶೇ.17 ಮಂದಿ ಮಾತ್ರ ಶಿಕ್ಷಣ ಪಡೆದಿದ್ದರು. ಬ್ರಿಟೀಷರ ಆಳ್ವಿಕೆ ಶುರುವಾದ ಬಳಿಕ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಕಡೆಗಣಿಸಿ, ಅವರ ಪದ್ಧತಿಯನ್ನು ಅಳವಡಿಸಿದರು.
ಆದರೆ, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಇಂಗ್ಲೆಂಡ್‌ನಲ್ಲಿ ಅಳವಡಿಸಲಾಯಿತು. ಹೀಗಾಗಿ, ಅಲ್ಲಿ ಶೇ.70 ಮಂದಿ ಅಲ್ಲಿ ಶಿಕ್ಷಣ ಪಡೆದರು. ಬ್ರಿಟನ್ ಶಿಕ್ಷಣ ವ್ಯವಸ್ಥೆ ದೇಶದಲ್ಲಿ ಜಾರಿಗೆ ಬಂದ ಬಳಿಕ ಶೇ.17 ಮಂದಿ ಮಾತ್ರ ಶಿಕ್ಷಣ ಪಡೆಯುವಂತಾಯಿತು ಎಂದು ಹೇಳಿದ್ದಾರೆ ಎಂದು “ಎಎನ್‌ಐ’ ವರದಿ ಮಾಡಿದೆ. ಬ್ರಿಟೀಷರು ದೇಶಕ್ಕೆ ಬರುವ ಮೊದಲು ದೇಶದಲ್ಲಿ ಜಾತಿ ಆಧಾರಿತ ತಾರತಮ್ಯ ಕೂಡ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಮತಾಂತರ ಹೊಂದಿದವರಿಗೆ ಮೀಸಲು ಬೇಡ
ದಲಿತ ಸಮುದಾಯದಿಂದ ಮುಸ್ಲಿಂ, ಕ್ರಿಶ್ಚಿಯನ್‌ಗೆ ಮತಾಂತರ ಹೊಂದಿದವರಿಗೆ ಮೀಸಲು ನೀಡುವ ವ್ಯವಸ್ಥೆ ಬೇಡ ಎಂದು ಆರ್‌ಎಸ್‌ಎಸ್ ಪ್ರತಿಪಾದಿಸಿದೆ. ನವದೆಹಲಿಯಲ್ಲಿ ಹಲವು ಸಂಘಟನೆಗಳ ಜತೆಗೂಡಿ ಆರ್‌ಎಸ್‌ಎಸ್‌ನ ಮಾಧ್ಯಮ ವಿಭಾಗ ವಿಶ್ವ ಸಂವಾದ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ಸಮಿತಿಗೆ ಮನವಿ ಸಲ್ಲಿಸಲೂ ತೀರ್ಮಾನಿಸಲಾಗಿದೆ.