Advertisement

ಮಂಗಳೂರು ಆರ್‌ಟಿಒದಲ್ಲಿ ಶೇ.70ರಷ್ಟು ಹುದ್ದೆಗಳು ಖಾಲಿ!

11:39 PM Oct 13, 2020 | mahesh |

ಮಹಾನಗರ: ಮಂಗಳೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಶೇ.70ರಷ್ಟು ಹುದ್ದೆಗಳು ಖಾಲಿ ಇದ್ದು, ಇದರಿಂದಾಗಿ ಹೊಸ ವಾಹನಗಳ ನೋಂದಣಿ, ಚಾಲನ ಪರವಾನಿಗೆ ಪಡೆಯುವುದು ಸಹಿತ ಸಾರ್ವಜನಿಕರಿಗೆ ಬಹಳ ಹತ್ತಿರವಾಗಿರುವ ಈ ಇಲಾಖೆಯಲ್ಲಿ ಆಗಬೇಕಾಗಿರುವ ಬಹಳಷ್ಟು ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ.

Advertisement

ರಾಜ್ಯ ಸರಕಾರದಿಂದ ಮಂಗಳೂರು ಸಾರಿಗೆ ಇಲಾಖೆಗೆ ಮಂಜೂರಾದ 97 ಹುದ್ದೆಗಳ ಪೈಕಿ ಕೇವಲ 27 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ ಬರೋಬ್ಬರಿ 58 ಹುದ್ದೆಗಳಲ್ಲಿ ಸಿಬಂದಿಯೇ ಇಲ್ಲದೆ ಖಾಲಿ ಇವೆ. ಹತ್ತಾರು ಕೆಲಸಗಳಿಗಾಗಿ ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಹೋಗುವ ಆರ್‌ಟಿಒ ದಂಥಹ ಮಹತ್ವದ ಇಲಾಖೆಯಲ್ಲಿಯೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿಯಿರಬೇಕಾದರೆ ಜನರು ಪಡುತ್ತಿರುವ ಸಂಕಷ್ಟ ಹೇಳತೀರದ್ದು. ಇನ್ನೊಂದೆಡೆ, 97 ಮಂದಿ ಇರಬೇಕಾದ ಕಚೇರಿಯಲ್ಲಿ ಬೆರಳೆಣಿಕೆಯಷ್ಟು ಸಿಬಂದಿ ಇರಬೇಕಾದರೆ, ಅವರ ಮೇಲೆಯೂ ಅಷ್ಟೇ ಕೆಲಸದ ಒತ್ತಡವಿರುತ್ತದೆ. ಈ ಬಗ್ಗೆ ಇಲ್ಲಿನ ಸಾರಿಗೆ ಇಲಾಖೆಯಿಂದಲೂ ರಾಜ್ಯ ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಲಿಲ್ಲ ಎನ್ನುವುದು ವಾಸ್ತವ.

ಯಾವೆಲ್ಲಾ ಹುದ್ದೆ ಖಾಲಿ ಇದೆ?
ಮಂಗಳೂರು ಸಾರಿಗೆ ಕಚೇರಿಯಲ್ಲಿ ಮಂಜೂ ರಾದ 97 ಹುದ್ದೆಗಳ ಪೈಕಿ 58 ಹುದ್ದೆಗಳು ಖಾಲಿ ಇದ್ದು, ಮುಖ್ಯವಾಗಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ 2 ಹುದ್ದೆಗಳ ಪೈಕಿ ಒಂದು ಹುದ್ದೆ ಮಾತ್ರ ಭರ್ತಿಯಾಗಿದೆ. ಲೆಕ್ಕ ಪತ್ರಾಧಿಕಾರಿ ಒಂದು ಹುದ್ದೆ ಖಾಲಿ, ಅಧೀಕ್ಷಕರು 4 ಹುದ್ದೆಯಲ್ಲಿ 3 ಹುದ್ದೆ ಕಾರ್ಯನಿರ್ವಹಿಸುತ್ತಿದ್ದು, ಒಬ್ಬರನ್ನು ಬೇರೆ ಕಚೇರಿಗೆ ನಿಯೋಜನೆ ಮಾಡಲಾಗಿದೆ. ಪ್ರಥಮ ದರ್ಜೆ ಸಹಾಯಕರು ಮಂಜೂರಾದ 13 ಹುದ್ದೆಯಲ್ಲಿ 7 ಹುದ್ದೆ ಖಾಲಿ ಇದ್ದು, ಒಬ್ಬರನ್ನು ಬೇರೆ ಕಚೇರಿಗೆ ನಿಯೋಜನೆ ಮಾಡಲಾಗಿದೆ. ಲೆಕ್ಕ ಪರಿಶೋಧಕ 2 ಹುದ್ದೆಯಲ್ಲಿ ಒಂದು ಹುದ್ದೆ ಖಾಲಿ ಇದೆ. ಶೀಘ್ರ ಲಿಪಿಕಾರ ಮಂಜೂರಾದ ಒಂದು ಹುದ್ದೆಯಲ್ಲಿ ಯಾವುದೇ ಭರ್ತಿಯಾಗಿಲ್ಲ. ಬೆರಳಚ್ಚುಗಾರ 3 ಹುದ್ದೆಯಲ್ಲಿ 2 ಹುದ್ದೆ ಕಾರ್ಯನಿರ್ವಹಿಸುತ್ತಿದ್ದು, ಒಬ್ಬರು ಬೇರೆ ಕಚೇರಿಗೆ ನಿಯೋಜನೆಗೊಂಡಿದ್ದಾರೆ. ದ್ವಿತೀಯ ದರ್ಜೆ ಸಹಾಯಕರು 33 ಮಂಜೂರಾದ ಹುದ್ದೆಗಳ ಪೈಕಿ 4 ಹುದ್ದೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 25 ಹುದ್ದೆ ಖಾಲಿ ಇದೆ. 4 ಮಂದಿಯನ್ನು ಬೇರೆ ಕಚೇರಿಗೆ ನಿಯೋಜಿಸಲಾಗಿದೆ. 3 ಚಾಲಕ ಹುದ್ದೆಯಲ್ಲಿ 2 ಹುದ್ದೆ ಖಾಲಿ ಇದ್ದು, ಒಬ್ಬರನ್ನು ಬೇರೆ ಕಚೇರಿಗೆ ನಿಯೋಜಿಸಿದೆ. 4 ಅಟೆಂಡರ್‌ ಹುದ್ದೆಯಲ್ಲಿ 1 ಹುದ್ದೆ ಕಾರ್ಯನಿರ್ವಹಿಸುತ್ತಿದ್ದು, 3 ಹುದ್ದೆ ಖಾಲಿ, ಡಿ. ದರ್ಜೆ ನೌಕರರ 5 ಹುದ್ದೆಯಲ್ಲಿ 4 ಹುದ್ದೆ ಖಾಲಿ ಇದ್ದು, ಒಬ್ಬರನ್ನು ಬೇರೆ ಕಚೇರಿಗೆ ನಿಯೋಜಿಸಿದೆ. ಖಜಾನೆ ಕಾವಲುಗಾರ ಮಂಜೂರಾದ 2 ಹುದ್ದೆಯಲ್ಲಿ 2 ಹುದ್ದೆ ಖಾಲಿ ಇದೆ. ರಾತ್ರಿ ಕಾವಲುಗಾರ ಮಂಜೂರಾದ ಒಂದು ಹುದ್ದೆಯಲ್ಲಿ ಆ ಹುದ್ದೆ ಖಾಲಿ ಇದೆ. ಹಿರಿಯ ಮೋಟರು ವಾಹನ ನಿರೀಕ್ಷಕನ 8 ಹುದ್ದೆಯಲ್ಲಿ ಒಂದು ಹುದ್ದೆ ಖಾಲಿ ಇದ್ದು, 2 ಮಂದಿಯನ್ನು ಬೇರೆ ಕಚೇರಿಗೆ ನಿಯೋಜನೆ ಮಾಡಲಾಗಿದೆ. ಮೋಟರು ವಾಹನ ನಿರೀಕ್ಷಕರ 12 ಹುದ್ದೆಯಲ್ಲಿ 9 ಹುದ್ದೆ ಖಾಲಿ ಇದ್ದು, ಒಬ್ಬರು ಬೇರೆ ಕಚೇರಿಗೆ ನಿಯೋಜನೆಗೊಂಡಿರುತ್ತಾರೆ.

12 ಮಂದಿ ಬೇರೆ ಕಚೇರಿಗೆ
ಪ್ರಸ್ತುತ ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ 58 ಹುದ್ದೆಗಳು ಖಾಲಿ ಇದ್ದು, ಇಲ್ಲಿನ ಕೆಲಸಗಳಿಗೇ ಸಿಬಂದಿ ಕೊರತೆಯಿದೆ. ಪರಿಸ್ಥಿತಿ ಹೀಗಿರುವಾಗ, ಒಟ್ಟು 12 ಮಂದಿ ಇಲ್ಲಿನ ಸಿಬಂದಿಯು ಬೇರೆ ಕಚೇರಿಗಳಿಗೆ ನಿಯೋಜನೆಗೊಂಡಿರುವುದು ವಿಶೇಷ. ಮುಖ್ಯವಾಗಿ ಅಧೀಕ್ಷಕರು-1, ಪ್ರಥಮ ದರ್ಜೆ ಸಹಾಯಕರು-1, ಬೆರಳಚ್ಚುಗಾರರು-1, ದ್ವಿತೀಯ ದರ್ಜೆ ಸಹಾಯಕರು-4, ಚಾಲಕರು-1, ಡಿ. ದರ್ಜೆ ನೌಕರರು-1, ಹಿರಿಯ ಮೋಟರು ವಾಹನ ನಿರೀಕ್ಷಕರ-2 ಹಾಗೂ ಒಬ್ಬರು ಮೋಟರು ವಾಹನ ನಿರೀಕ್ಷಕರು ಬೇರೆಡೆಗೆ ನಿಯೋಜನೆಗೊಂಡಿದ್ದಾರೆ.

ಹುದ್ದೆಗಳ ವಿವರ
ಮಂಜೂರಾದ ಹುದ್ದೆ: 97
ಪ್ರಸ್ತುತ ಕಾರ್ಯ
ನಿರ್ವಹಿಸುತ್ತಿರುವ ಹುದ್ದೆ: 27
ಖಾಲಿ ಹುದ್ದೆ: 58
ನಿಯೋಜನೆ ಮೇರೆಗೆ ಬೇರೆ ಕಚೇರಿಗೆ: 12

Advertisement

ಸರಕಾರದ ಗಮನಕ್ಕೆ ತರಲಾಗಿದೆ
ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಮಂಜೂರಾದ 97 ಹುದ್ದೆಗಳಲ್ಲಿ 58 ಹುದ್ದೆಗಳು ಖಾಲಿ ಇರುವುದು ನಿಜ. ಈ ಹುದ್ದೆಗಳ ಭರ್ತಿ ಕುರಿತು ರಾಜ್ಯ ಸರಕಾರದ ಗಮನಕ್ಕೆ ತರಲಾಗಿದೆ. ಈಗಿರುವ ಕಡಿಮೆ ಸಿಬಂದಿಯಿಂದಾಗಿ ಅವರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ.
-ವರ್ಣೇಕರ್‌,  ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next