ಪಾಟ್ನಾ: ಮದುವೆ ಮೆರವಣಿಗೆಯಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ 7 ವರ್ಷದ ಬಾಲಕಿ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಪಾಟ್ನಾದ ದಾನಪುರ್ ದಿಯಾನಾ ಪ್ರದೇಶದ ಫುಟಾನಿ ಮಾರುಕಟ್ಟೆಯಲ್ಲಿ ನಡೆದಿದೆ.
ತಡರಾತ್ರಿಯ ವೇಳೆ ಸಾಗುತ್ತಿದ್ದ ಮದುವೆ ಮೆರವಣಿಗೆಯಲ್ಲಿ ಇಬ್ಬರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ವಧುವಿನ ಸಂಬಂಧಿಕರು ಎನ್ನಲಾದ ಬುಧನ್ ರೈ ಮತ್ತು ಅನಿಲ್ ಷಾ ಗುಂಡಿನ ದಾಳಿ ನಡೆಸಿದ ಪರಿಣಾಮ ಅತಿಥಿಯಾಗಿ ಆಗಮಿಸಿದ್ದ ಶಿವಾನಿ ಕುಮಾರಿ (7) ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಐದು ಮಂದಿ ಗಾಯಗೊಂಡಿದ್ದಾರೆ.
ಯಾವ ಕಾರಣಕ್ಕೆ ಗುಂಡು ಹಾರಿಸಿದ್ದಾರೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಘಟನೆ ಸಂಬಂಧ ಇಬ್ಬರು ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಬುಧನ್ ರೈಯನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಅನಿಲ್ ಷಾ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.