ಆಂಧ್ರಪ್ರದೇಶ: ತೈಲಗಾರದ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ 7 ಮಂದಿ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಕಾಕಿನಡ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದೆ.
ಕಾಕಿನಡ ಜಿಲ್ಲೆಯ ಅಂಬಟಿ ಸುಬ್ಬಣ್ಣಎಂಬ ತೈಲ ಕಾರ್ಖಾನೆಯಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆಯೆಂದು ಹೇಳಲಾಗಿದೆ. ಟ್ಯಾಂಕ್ ಸ್ವಚ್ಛಗೊಳಿಸಲು ಕಾರ್ಮಿಕರು ಒಬ್ಬೊಬ್ಬರಾಗಿ ಟ್ಯಾಂಕ್ ಒಳಗೆ ಇಳಿದಿದ್ದು ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ವೆಚಂಗಿ ಕೃಷ್ಣ, ವೆಚಂಗಿ ನರಸಿಂಹಂ, ವೆಚಂಗಿ ಸಾಗರ್, ಕೊರತಡು ಬಾಬು, ಕರಿ ರಾಮ ರಾವ್, ಕಟ್ಟಮುರಿ ಜಗದೀಶ್, ಪ್ರಸಾದ್ ಎಂದು ಗುರುತಿಸಲಾಗಿದೆ.
ಮೃತ 7 ಮಂದಿ ಕಾರ್ಮಿಕರು ಕೂಡಾ ಕೇವಲ 10 ದಿನದ ಮೊದಲಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ದುರಂತ ನಡೆದ ತೈಲ ಕಾರ್ಖಾನೆ, ಕಾರ್ಖಾನೆ ಕಾಯ್ದೆಯ ಅಡಿಯಲ್ಲಿ ಗುರುತಿಸಿಕೊಂಡಿಲ್ಲ. ಅಲ್ಲದೆ ಕಲುಷಿತವಾದ ಅನಿಲವನ್ನು ಸೇವಿಸಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.