ಮುಂಬಯಿ: ಯುನೈಟೆಡ್ ಕಿಂಗ್‌ಡಮ್, ರಷ್ಯಾ ಹಾಗೂ ಇಸ್ರೇಲ್‌ನಲ್ಲಿ ಹೊಸ ಅಪಾಯ ಸೃಷ್ಟಿಸಿರುವ “ಎವೈ.4.2′ ಎಂಬ ಕೋವಿಡ್ ವೈರಾಣುವಿನ ಹೊಸ ರೂಪಾಂತರಿ ಈಗ ಭಾರತದಲ್ಲೂ ಕಾಣಿಸಿಕೊಂಡಿದೆ!
ಇದು, ಹೆಚ್ಚು ಪ್ರಸರಣ ಶಕ್ತಿ ಹಾಗೂ ಹೆಚ್ಚು ಘಾಸಿಗೊಳಿಸುವ ಛಾತಿ ಹೊಂದಿರುವ ಡೆಲ್ಟಾ ಮಾದರಿಯ ರೂಪಾಂತರಿ ಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ಇಂದೋರ್‌ನಲ್ಲಿ ಒಟ್ಟು ಏಳು ಜನರಲ್ಲಿ ಈ ಹೊಸ ವೈರಾಣು ಪತ್ತೆಯಾಗಿದೆ. ಇವರಲ್ಲಿ ಇಂದೋರ್‌ನ ಮಹೌ ದಂಡುಪ್ರದೇಶದಲ್ಲಿ ವಾಸಿಸುತ್ತಿರುವ ಇಬ್ಬರು ಯೋಧರೂ ಸೇರಿದ್ದಾರೆ ಎಂದು “ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ’ (ಎನ್‌ಸಿಡಿಸಿ) ತಿಳಿಸಲಾಗಿದೆ. ಹೀಗಾಗಿ ದೇಶಾದ್ಯಂತ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಕೇವಲ ಬೆರಳೆಣಿಕೆ ಪ್ರಕರಣಗಳಲ್ಲಿ ಎವೈ 4.2 ವೈರಾಣು ಪತ್ತೆಯಾಗಿರುವುದರಿಂದ ಅವು ಮನುಷ್ಯನ ದೇಹದ ಮೇಲೆ ಯಾವ ರೀತಿಯ ದುಷ್ಪರಿಣಾಮವನ್ನು ಬೀರುತ್ತದೆ ಎಂದು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ:ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ
ಸತತ 30ನೇ ದಿನವೂ ಕಡಿಮೆ: ಶನಿವಾರ ದಿಂದ ರವಿವಾರದ ಅವಧಿಯಲ್ಲಿ ದೇಶ ದಲ್ಲಿ 15,906 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸತತ 30ನೇ ದಿನವೂ ಭಾರತದಲ್ಲಿ ದೈನಂದಿನ ಹೊಸ ಪ್ರಕರಣಗಳು 30,000ಕ್ಕಿಂತ ಕಡಿಮೆಯಾಗಿವೆ. ಇನ್ನು, ಇದೇ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 0.51ರಷ್ಟು ಇಳಿಕೆಯಾಗಿದ್ದು (1,72,594), 2020ರ ಮಾರ್ಚ್‌ನ ಅನಂತರ ಇದು ಅತೀ ಕಡಿಮೆ. ಈ ನಡುವೆ, ತಮಿಳುನಾಡಿನಲ್ಲಿ ಚಿತ್ರಮಂದಿರ ಗಳಿಗೆ ಇದ್ದ ಕೊರೊನಾ ನಿರ್ಬಂಧ ಸಡಿಲಿ ಸಲಾಗಿದ್ದು, ಶೇ. 100 ಆಸನ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ.