ಕಲಬುರಗಿ: ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಇದೇ ಮಳೆಗಾಲದ ಆರಂಭ ಎಂದು ಕೊಂಡು ಈ ಬಾರಿಯ ಮುಂಗಾರು ಹಂಗಾಮಿಗಾಗಿ ರೈತರು ಸಜ್ಜಾಗುತ್ತಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕೃಷಿ ಇಲಾಖೆ ಕೊಡವಿಕೊಂಡು ಎದ್ದಿದೆ.
ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಒಟ್ಟು 7.84.353 ಹೆಕ್ಟೇರ್ ಜಮೀನನಲ್ಲಿ ಬಿತ್ತನೆಯ ಗುರಿ ಹೊಂದಿದೆ. ಇದೇ ವೇಳೆ ಈ ಬಾರಿ ಜಿಲ್ಲೆಯಲ್ಲಿ ಕಬ್ಬು ಮತ್ತು ಸೋಯಾಬೀನ್ ಬೆಳೆಯುವ ಕ್ಷೇತ್ರ ವಿಸ್ತರಣೆ ಆಗಿದೆ. ರೈತರು ತೊಗರಿ ಕುರಿತು ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ವಾಣಿಜ್ಯ ಬೆಳಗಳತ್ತ ಚಿತ್ತ ಹರಿಸಿದ್ದಾರೆ. ಅಲ್ಲದೇ, ಈ ಬಾರಿ ಹತ್ತಿ ಬೆಳೆಯುವ ಕ್ಷೇತ್ರವೂ ವಿಸ್ತಾರಗೊಳ್ಳುತ್ತಿರುವುದು ಸಂತಸ ಮೂಡಿಸಿದೆ.
5.52ಲಕ್ಷ ಹೆಕ್ಟೇರ್ನಲ್ಲಿ ತೊಗರಿ: ಈ ಬಾರಿ 5,52,622 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯುವ ಸಾಧ್ಯತೆ ಇದೆ. ಕಳೆದ ಬಾರಿಗಿಂತ ತುಸು ಕಡಿಮೆ ಎನ್ನಿಸಿದರೂ ಉತ್ತಮ ಇಳುವರಿ ನಿರೀಕ್ಷೆ ಮಾಡಲಾಗಿದೆ. ಅಂದಾಜು 5.61 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಇಟ್ಟುಕೊಳ್ಳಲಾಗಿದೆ. ಅದರೊಂದಿಗೆ 52,297 ಹೆಕ್ಟೇರ್‌ನಲ್ಲಿ ಹೆಸರು, 32,451 ಹೆಕ್ಟೇರ್‌ನಲ್ಲಿ ಉದ್ದು ಬೆಳೆಯಲು ಯೋಜಿಸಲಾಗಿದೆ. ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ, ಶೇಂಗಾ, ಸೋಯಾಬೀನ್, ಔಡಲ ಎಲ್ಲವೂ ಸೇರಿ ಒಟ್ಟು 35,691 ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಇದರಿಂದ ಒಟ್ಟು 34,962 ಮೆ.ಟನ್ ಉತ್ಪಾದನೆ ನಿರೀಕ್ಷೆ ಹೊಂದಲಾಗಿದೆ.
ಕಬ್ಬು, ಹತ್ತಿ ಕ್ಷೇತ್ರ ಹೆಚ್ಚಳ: ಈ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರು ಕಬ್ಬಿಗೆ ಹೆಚ್ಚು ಜೋತು ಬೀಳುವ ಲಕ್ಷಣಗಳು ಕಾಣಿಸಿವೆ. ಅಂದಾಜು 29,683 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಇದೇ ವೇಳೆ ಹತ್ತಿ ಕ್ಷೇತ್ರದಲ್ಲೂ ವಿಸ್ತರಣೆ ಕಾಣುತ್ತಿದೆ. ಒಟ್ಟು 63,458 ಹೆಕ್ಟೇರ್‌ನಲ್ಲಿ ಬೆಳೆಯುವ ಯೋಜನೆ ಹೊಂದಲಾಗಿದೆ. ಕಳೆದ ವರ್ಷ ಹತ್ತಿಗೆ ಭಾರಿ ಬೆಲೆ ಬಂದ ಹಿನ್ನೆಲೆಯಲ್ಲಿ ರೈತರು ಸಹಜವಾಗಿಯೇ ಹತ್ತಿ ಬೆಳೆಯತ್ತ ಆಕರ್ಷಿತರಾಗಿದ್ದಾರೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಇದು ಸಾಂಪ್ರದಾಯಿಕ ಮುಂಗಾರಿನ ಆರಂಭವಲ್ಲದೇ ಇದ್ದರೂ, ರೈತರು ಹೊಲ ಸಜ್ಜು ಮಾಡುತ್ತಿದ್ದಾರೆ. ಇದರಿಂದಾಗಿ ಕೃಷಿ ಚಟುವಟಿಕೆ ಆರಂಭಗೊಂಡಿವೆ. ಒಟ್ಟು 7.84 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯುವ ಗುರಿ ಹೊಂದಿದ್ದು, 31,30,483 ಮೆಟ್ರಿಕ್ ಟನ್ ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದೆ. ಕಬ್ಬು, ಸೋಯಾಬೀನ್ ಕ್ಷೇತ್ರ ವಿಸ್ತರಣೆ ಆಗುತ್ತಿದೆ.
–ರತೇಂದ್ರನಾಥ ಸೂಗೂರು, ಜೆಡಿ ಕೃಷಿ ಇಲಾಖೆ