ಲಕ್ನೋ: ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಉತ್ತರಪ್ರದೇಶದ ಆರು ವರ್ಷದ ಬಾಲಕಿ ಸಾಕ್ಷಿಯಾಗಿದ್ದು, ಕೇವಲ 11 ನಿಮಿಷಗಳಲ್ಲಿ ಯಮುನಾ ನದಿಯನ್ನು ದಾಟುವ ಮೂಲಕ ದಾಖಲೆ ಬರೆದಿದ್ದಾಳೆ.
ಇದನ್ನೂ ಓದಿ:ಆರಂಭಿಕ ವಹಿವಾಟಿನಲ್ಲಿ… ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 340 ಅಂಕ ಇಳಿಕೆ, ನಿಫ್ಟಿ ಕುಸಿತ
ಪ್ರಯಾಗ್ ರಾಜ್ ನ ಪ್ರೀತಂ ನಗರದ ನಿವಾಸಿ ವೃತಿಕಾ ಶಾಂಡಿಲ್ಯ ಈಜುವ ಮೂಲಕ 11 ನಿಮಿಷದಲ್ಲಿ ಯುಮುನಾ ನದಿ ದಾಟಿ ತರಬೇತುದಾರರನ್ನು ಬೆರಗುಗೊಳಿಸಿರುವುದಾಗಿ ವರದಿ ತಿಳಿಸಿದೆ.
ಸೈಂಟ್ ಅಂಥೋನಿ ಬಾಲಕಿಯರ ಕಾನ್ವೆಂಟ್ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ವೃತಿಕಾ ತನ್ನ ತರಬೇತುದಾರರ ಮಾರ್ಗದರ್ಶನದಲ್ಲಿ ಬೆಳಗ್ಗೆ 6-10ಕ್ಕೆ ಮೀರಾಪುರ್ ಸಿಂಧು ಸಾಗರ್ ಘಾಟ್ ನಿಂದ ಈಜಲು ಪ್ರಾರಂಭಿಸಿದ್ದು, 6 ಗಂಟೆ 21ನಿಮಿಷಕ್ಕೆ ವಿದ್ಯಾಪೀಠ ಮಹೇವಾಘಾಟ್ ನಲ್ಲಿ ನದಿಯ ಇನ್ನೊಂದು ದಡವನ್ನು ತಲುಪಿರುವುದಾಗಿ ವರದಿ ವಿವರಿಸಿದೆ.
ವೃತಿಕಾ ತರಬೇತುದಾರ ತ್ರಿಭುವನ್ ನಿಶಾದ್ ಈ ಕುರಿತು ಪ್ರತಿಕ್ರಿಯೆ ನೀಡಿ, ಈಕೆ ಈಜು ಕಲಿಯಲು ಆರಂಭಿಸಿದ ಮೊದಲ ದಿನದಿಂದಲೇ ಕಠಿಣ ಪರಿಶ್ರಮದಿಂದ ನದಿಯನ್ನು ದಾಟಬೇಕೆಂಬ ಇಚ್ಛೆ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.
ವೃತಿಕಾ ಈಜನ್ನು ಆರಂಭಿಸುವ ಮೊದಲು ಮಾ ಲಲಿತಾ ದೇವಿ ದೇವಸ್ಥಾನ ಮತ್ತು ಭಗವಾನ್ ಹನುಮಾನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಳು. ನಂತರ ತನ್ನ ಹಿರಿಯ ತರಬೇತುದಾರ ಕಮಲಾ ನಿಶಾದ್ ಅವರಿಂದ ಆಶೀರ್ವಾದ ಪಡೆದಿರುವುದಾಗಿ ವರದಿ ತಿಳಿಸಿದೆ.