Advertisement

Rajasthan: ಶೇ.68 ಮತದಾನ: ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ

11:51 PM Nov 25, 2023 | Team Udayavani |

ಹೊಸದಿಲ್ಲಿ: ಒಂದೆರಡು ಅಹಿತಕರ ಘಟನೆ ಹೊರತುಪಡಿಸಿದರೆ, ರಾಜಸ್ಥಾನದ 199 ವಿಧಾನಸಭೆ ಕ್ಷೇತ್ರಗಳಿಗೆ ಶನಿವಾರ ಶಾಂತಿಯುತವಾಗಿ ಮತದಾನ ನಡೆದಿದ್ದು, ಸಂಜೆ 5ರ ವೇಳೆಗೆ ಶೇ.68ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಕಳೆದ ಚುನಾವಣೆಯಲ್ಲಿ ಶೇ.74.06ರಷ್ಟು ಮತದಾನ ದಾಖಲಾಗಿತ್ತು.

Advertisement

ಈ ಬಾರಿ ಆಡಳಿತಾರೂಢ ಕಾಂಗ್ರೆಸ್‌ ಮತ್ತು ವಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದ್ದು, 5.25 ಕೋಟಿ ಮತದಾರರು ಶನಿವಾರ 1,862 ಅಭ್ಯರ್ಥಿಗಳ ಭವಿಷ್ಯವನ್ನು ಬರೆದಿದ್ದಾರೆ. ಡಿ.3ರಂದು ಫ‌ಲಿತಾಂಶ ಪ್ರಕಟವಾಗಲಿದೆ. ಸಿಕಾರ್‌ನ ಫ‌ತೇಪುರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು,ಯೋಧ ರೊಬ್ಬರು ಗಾಯ ಗೊಂಡಿದ್ದಾರೆ. ಡೀಗ್‌ ಜಿಲ್ಲೆಯಲ್ಲಿ ಕಲ್ಲುತೂರಾಟ ನಡೆದಿದೆ. ಟೋಂಕ್‌ ಜಿಲ್ಲೆಯಲ್ಲಿ 40-50 ಜನರ ಗುಂಪು ಮತಗಟ್ಟೆಯೊಂದಕ್ಕೆ ನುಗ್ಗಲು ಯತ್ನಿಸಿದ್ದು, ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಡಿ.3ರಂದು ರಾಜ್ಯದಲ್ಲಿ ಕಮಲ ಅರಳಲಿದೆ ಎಂದು ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೇ ಹೇಳಿದರೆ, ಆಡಳಿತ ವಿರೋಧಿ ಅಲೆ ಇಲ್ಲ, ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೇರಲಿದೆ ಎಂದು ಹಾಲಿ ಸಿಎಂ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

ರಾಹುಲ್‌ ವಿರುದ್ಧ ದೂರು: ರಾಜಸ್ಥಾನ ಚುನಾವಣೆಯ ದಿನವೇ ಕಾಂಗ್ರೆಸ್‌ಗೆ ಮತ ಹಾಕುವಂತೆ ಟ್ವಿಟರ್‌ನಲ್ಲಿ(ಎಕ್ಸ್‌)ನಲ್ಲಿ ಬರೆದುಕೊಂಡ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ವಿರುದ್ಧ ಬಿಜೆಪಿ ದೂರು ನೀಡಿದೆ. ಇವರಿಬ್ಬರೂ ಚುನಾವಣ ನೀತಿ ಸಂಹಿತೆ ಉಲ್ಲಂ ಸಿದ್ದು, ಕೂಡಲೇ ಇವರ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಅಮಾನತಿನಲ್ಲಿಟ್ಟು, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ರಾಹುಲ್‌ ಮತ್ತು ಪ್ರಿಯಾಂಕಾ, “ರಾಜಸ್ಥಾನವು ಗ್ಯಾರಂಟಿಗಳ ಸರಕಾರವನ್ನು ಆಯ್ಕೆ ಮಾಡಿಕೊಳ್ಳಲಿದೆ. ಅಗ್ಗದ ದರದ ಗ್ಯಾಸ್‌ ಸಿಲಿಂಡರ್‌, ಬಡ್ಡಿರಹಿತ ಕೃಷಿ ಸಾಲ, ಆಂಗ್ಲ ಶಿಕ್ಷಣ, ಒಪಿಎಸ್‌, ಜಾತಿಗಣತಿಯನ್ನು ಆಯ್ಕೆ ಮಾಡಿಕೊಳ್ಳಲಿದೆ’ ಎಂದು ಬರೆದುಕೊಂಡಿದ್ದರು.

ಕೀಳು ಹೇಳಿಕೆ: ಹೈದರಾಬಾದ್‌ನಲ್ಲಿ ಶನಿವಾರ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರಧಾನಿ ಮೋದಿ ಅವರನ್ನು “ಅಪಶಕುನ’ ಎನ್ನುವ ರಾಹುಲ್‌ಗಾಂಧಿ ಹೇಳಿಕೆ ಅತ್ಯಂತ ಕೀಳುಮಟ್ಟದ್ದಾಗಿದ್ದು, ಅಸೆಂಬ್ಲಿ ಚುನಾವಣೆಯಲ್ಲಿ ಜನರು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದಿದ್ದಾರೆ.

Advertisement

ಜನಪದ ಕಲಾವಿದರೊಂದಿಗೆ ಪ್ರಿಯಾಂಕಾ ನೃತ್ಯ
ತೆಲಂಗಾಣದಲ್ಲಿ ಶನಿವಾರ ಕಾಂಗ್ರೆಸ್‌ ರೋಡ್‌ಶೋ ವೇಳೆ ಪಕ್ಷದ ನಾಯಕಿ ಪ್ರಿಯಾಂಕಾ ವಾದ್ರಾ ಅವರು ಜನಪದ ಕಲಾವಿದರೊಂದಿಗೆ ಹಾಡಿಗೆ ಹೆಜ್ಜೆಹಾಕಿದ್ದಾರೆ. ಕಲಾವಿದರು ವಾಹನದ ಮೇಲೆ ನಿಂತು ನೃತ್ಯ ಮಾಡುತ್ತಿದ್ದರೆ, ಪ್ರಿಯಾಂಕಾ ಕೂಡ ಚಪ್ಪಾಳೆ ತಟ್ಟುತ್ತಾ, ತಾವೂ ಹೆಜ್ಜೆ ಹಾಕುತ್ತಾ ಹುರಿದುಂಬಿಸಿರುವ ವೀಡಿಯೋ ವೈರಲ್‌ ಆಗಿದೆ.

ಹೆಸರು ಬದಲಾವಣೆಯಿಂದ “ಭ್ರಷ್ಟಾಚಾರ”ದ ಕಳಂಕ ತೊಲಗಲ್ಲ
ಟಿಆರ್‌ಎಸ್‌ ತನ್ನ ಹೆಸರನ್ನು ಬಿಆರ್‌ಎಸ್‌ ಎಂದು ಬದಲಿ ಸಿಕೊಂಡರೂ, ಯುಪಿಎ ತನ್ನ ಹೆಸರನ್ನು ಐಎನ್‌ಡಿಐಎ(ಇಂಡಿಯಾ) ಎಂದು ಬದಲಿಸಿಕೊಂಡರೂ, ಆ ಪಕ್ಷಗಳ ಭ್ರಷ್ಟಾಚಾರ ಮತ್ತು ದುರಾಡಳಿತದ ಕಳಂಕಗಳು ಮಾತ್ರ ತೊಲಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಶನಿವಾರ ತೆಲಂಗಾಣದ ಕಮರೆಡ್ಡಿಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಬಿಆರ್‌ಎಸ್‌ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಜನರಿಗೆ ದ್ರೋಹ ಮಾಡಲು ಎಲ್ಲ ರೀತಿಯ ತಂತ್ರಗಳನ್ನೂ ಬಳಸುತ್ತವೆ. ದೇಶದ ಜನರಿಗೆ ಈ ಟ್ರಿಕ್‌ಗಳೆಲ್ಲ ಗೊತ್ತು. ರಾಜ್ಯದ ಜನರಿಗೆ ಬಿಆರ್‌ಎಸ್‌ ಮತ್ತು ಕಾಂಗ್ರೆಸ್‌ನಿಂದ ವಿಮೋಚನೆ ಬೇಕಿದೆ. ಗಾಳಿಯು ಬಿಜೆಪಿ ಕಡೆ ಬೀಸುತ್ತಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next