ಬೆಂಗಳೂರು: ರಾಜ್ಯದ 6.73 ಲಕ್ಷ ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಮೋಷನ್ ಲೇಸರ್ ತಂತ್ರಜ್ಞಾನ ಅಳವಡಿಸಲಾಗಿದ್ದು ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಕೈಗೊಂಡಿದೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ.1ರಿಂದ 18ರವರೆಗೆ ನಡೆಯಲಿರುವ ಪರೀಕ್ಷೆಯಲ್ಲಿ ಒಟ್ಟು 6.73,606 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಳೆದ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಈ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 12,100 ಕಡಿಮೆಯಾಗಿದ್ದಾರೆ. ಆದರೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ನಡುವಣ ಪ್ರಮಾಣ ಇಳಿಮುಖವಾಗಿದೆ. ಈ ಬಾರಿ ಕೇವಲ 4130ರಷ್ಟಿದೆ ಎಂದು ವಿವರಿಸಿದರು.
ಈ ವರ್ಷ ಮೊದಲಬಾರಿಗೆ ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳ ಅಂಕಗಳನ್ನು ನೇರವಾಗಿ ಆನ್‌ಲೈನ್ ಮುಖಾಂತರ ಎಸ್‌ಡಿಸಿ ಸರ್ವರ್‌ಗೆ ಅಪ್ಲೋಡ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯಿಂದ ತ್ವರಿತಗತಿಯ ಫಲಿತಾಂಶ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಅಕ್ರಮ ತಡೆಗೆ ಮೋಷನ್ ಲೇಸರ್! : ಪರೀಕ್ಷಾ ಪ್ರಕ್ರಿಯೆ ವೇಳೆ ಅಕ್ರಮ ನಡೆಯದಂತೆ ತಡೆಯುವ ಸಲುವಾಗಿ ಸಿಎಂ ನೇತೃತ್ವದಲ್ಲಿ ಸಭೆ ನಡೆದು ಹಲವು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಶ್ನೆಪತ್ರಿಕೆಗಳನ್ನಿಟ್ಟಿರುವ ಖಜಾನೆಗಳಲ್ಲಿ ಮೋಷನ್ ಲೇಸರ್ ಸೆನ್ಸಾರ್ ತಂತ್ರಜ್ಞಾನ ಅಳವಡಿಸಲಾಗಿದ್ದು,ಅನಧಿಕೃತವಾಗಿ ಯಾರೇ ಪ್ರವೇಶಿಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿದೆ. ಪರೀಕ್ಷಾ ಕೇಂದ್ರಗಳು, ಮೌಲ್ಯಮಾಪನ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಇಲಾಖೆಯ ಕೇಂದ್ರ ಕಚೇರಿ ನಿಗಾ ಇರಲಿದೆ. ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ಟ್ರಾಕಿಂಗ್ ಸಿಸ್ಟಂ ಸೇರಿದಂತೆ ಪೊಲೀಸ್ ಇಲಾಖೆಯ ಜೊತೆ ಚರ್ಚಿಸಿ, ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆಯುವುದು ಸೇರಿದಂತೆ ಇನ್ನಿತರೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ವಿದ್ಯಾರ್ಥಿಗಳು ಹೊಂದಿರುವ ಬಸ್‌ಪಾಸ್ ಸೇವೆಯನ್ನು ಪರೀಕ್ಷಾ ಕೇಂದ್ರಗಳಿಗೂ ತೆರಳಲು ಅವಕಾಶ ನೀಡುವಂತೆ ಕೆಎಸ್ ಆರ್‌ಟಿಸಿ ಹಾಗೂ ಬಿಎಂಟಿಸಿ ಜತೆ ಚರ್ಚೆ ನಡೆಸಲಾಗಿದೆ ಎಂದು ಅವಕಾಶ ಸಿಗಲಿದೆ ಎಂದು ವಿವರಿಸಿದರು.