ಬೆಂಗಳೂರು: ಬಿಬಿಎಂಪಿಗೆ ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಆಸ್ತಿ ತೆರಿಗೆ ಈ ವರ್ಷ 600 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ. ಸುದ್ದಿಗಾರರ ಜತೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕಳೆದ ವರ್ಷದ 31 ಜುಲೈಗೆ 2,457.30 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು.
ಈ ವರ್ಷ 3065.82 ಕೋಟಿ ರೂ. ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ 600 ಕೋಟಿ ರೂ. ಹೆಚ್ಚಳವಾಗಿದೆ. ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಆಸ್ತಿ ಮಾಲೀಕರಿಂದ 184 ಕೋಟಿ ರೂ. ಸಂಗ್ರಹವಾಗಿದೆ ಎಂದು ವಿವರಿಸಿದ್ದಾರೆ.
ಬಾಕಿದಾರರ ಸಂಖ್ಯೆ 2.80 ಲಕ್ಷಕ್ಕೆ ಇಳಿಕೆ: ಈ ಹಿಂದೆ 3.95 ಲಕ್ಷ ಬಾಕಿದಾರರು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದರು. ಇದರಲ್ಲೀಗ 1.14 ಲಕ್ಷ ಬಾಕಿದಾರರಿಂದ 184 ಕೋಟಿ ರೂ. ಆದಾಯ ಸಂಗ್ರಹ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿದಾರರ ಸಂಖ್ಯೆ ಈಗ 2.80 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದರು.
ದಂಡ ವಸೂಲಿ ಹಲವು ಸ್ತರಗಳಲ್ಲಿ ಇದೆ: ಸರ್ಕಾರ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಸಂಬಂಧ ನೀಡಲಾಗಿದ್ದ “ಒಂದು ಬಾರಿ ಪರಿಹಾರ ಯೋಜನೆ'(ಒಟಿಎಸ್) ಅವಧಿ ಈಗಾಗಲೇ ಮುಗಿದಿದೆ. ಇನ್ನು ಮುಂದೆ ಯಾವುದೇ ರೀತಿ ಬಡ್ಡಿ ಮನ್ನಾವಾಗಲಿ ಜತೆಗೆ ರಿಯಾಯ್ತಿಯಾಗಲಿ ಇರುವುದಿಲ್ಲ. ದಂಡ ಹಾಕಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಕೆಲಸವನ್ನು ಪಾಲಿಕೆ ಕಂದಾಯ ಅಧಿಕಾರಿಗಳು ಮಾಡಲಿದ್ದಾರೆ. ದಂಡ ವಸೂಲಿ ಹಲವು ಸ್ತರಗಳಲ್ಲಿ ಇರಲಿದೆ. ಒಂದು ವರ್ಷಕ್ಕೆ ಶೇ.15 ದಂಡ ಹಾಕಬೇಕು ಎಂಬುವುದು ಬೈಲಾದಲ್ಲಿದೆ. ಅದಕ್ಕಿಂತಲೂ ಹೆಚ್ಚಿನ ವರ್ಷಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬೇರೆ ಬೇರೆ ರೀತಿಯಲ್ಲಿ ದಂಡ ಹಾಕುವುದು ನಿಯದಲ್ಲಿದೆ ಎಂದು ಮಾಹಿತಿ ನೀಡಿದರು.
ಜಪ್ತಿ ಕೂಡ ಮಾಡಬಹುದು: ಆಸ್ತಿ ತೆರಿಗೆ ವಿಚಾರದಲ್ಲಿ ಬೈಲಾಕ್ಕೆ ಹಲವು ನಿಯಮಗಳನ್ನು ಅಳವಡಿಕೆ ಮಾಡಲಾಗಿದೆ. ಕಾನೂನು ಮತ್ತು ನಿಯಮದಲ್ಲಿ ಹಲವು ಬದಲಾವಣೆ ತರಲಾಗಿದೆ. ಈ ಹಿಂದಿನ ಕಾನೂನಿಗಿಂತಲೂ ಕಠಿಣವಾಗಿದೆ. ಪಾಲಿಕೆ ಆಸ್ತಿ ತೆರಿಗೆ ವಸೂಲಿ ಸಂಬಂಧ ಮಾಲೀಕರಿಗೆ ನೋಟಿಸ್ ನೀಡಿದರೂ ತೆರಿಗೆ ಕಟ್ಟಿಲ್ಲ ಎಂದಾದರೆ ಬೇರೆ ವಿಧಾನಗಳಲ್ಲೂ ತೆರಿಗೆ ವಸೂಲಿ ಮಾಡಬಹುದಾಗಿದೆ. ಕರದಾತರ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಬಹುದಾಗಿದೆ. ಈ ಹಿಂದೆ ಆಸ್ತಿ ಹರಾಜಿಗೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಆದರೆ, ಹೊಸ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ. ಹೊಸ ನಿಯಮಾವಳಿಗಳು ಆಸ್ತಿ ತೆರಿಗೆ ಸಂಗ್ರಹಕ್ಕೆ ಪೂರಕವಾಗಿದೆ ಎಂದು ವಿವರಿಸಿದರು.
ಸರ್ಕಾರ ನಿರ್ಧಾರ ಕೈಕೊಳ್ಳಬೇಕು: ಈಗಾಗಲೇ ಆಸ್ತಿ ತೆರಿಗೆ ಪಾವತಿ ಯೋಜನೆ ಅವಧಿಯನ್ನು ವಿಸ್ತಾರ ಮಾಡುವಂತೆ ಹಲವು ಸಂಘ ಸಂಸ್ಥೆಗಳು ಮನವಿ ಮಾಡಿವೆ. ಆ.15ರವರೆಗೂ ವಿಸ್ತರಣೆ ಮಾಡುವಂತೆ ಹೋಟೆಲ್ ಮಾಲೀಕರ ಸಂಘ, ಎಫ್ಕೆಸಿಸಿಐ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಕೋರಿವೆ. ಜು.31ರಂದು ಆಸ್ತಿ ತೆರಿಗೆಗೆ ಕೊನೆಯ ದಿನವಾಗಿತ್ತು. ಅಂತಿಮ ದಿನದಂದು ಮಳೆ, ಸಾಫ್ಟ್ವೇರ್ ಕೂಡ ಕೈ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಕಂದಾಯ ಅಧಿಕಾರಿಗಳ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆಸ್ತಿ ತೆರಿಗೆ ಪಾವತಿ ಯೋಜನೆ ವಿಸ್ತರಣೆ ಮಾಡಬೇಕೇ? ಬೇಡವೇ? ಎಂಬುದನ್ನು ಸರ್ಕಾರ ನಿರ್ಧರಿಸಲಿದೆ ಎಂದು ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.