Advertisement

Bangalore: ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯ: ಆಯುಕ್ತ

10:45 AM Dec 26, 2023 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳಲ್ಲಿ ಫೆ.28ರ ಒಳಗೆ ಶೇ.60 ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಕನ್ನಡ ನಾಮಫ‌ಲಕ ಹಾಕದೇ ಇದ್ದರೆ ಅಂತಹ ಉದ್ಯಮದ ಪರವಾನಿಗೆ ರದ್ದುಗೊಳಿಸುವುದಾಗಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ,  ಪಾಲಿಕೆ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗ‌ಳು, ಮಾಲ್‌ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯ ವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಎಲ್ಲಾ ವಲಯ ಆಯುಕ್ತರ ಜತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

ನಗರದಲ್ಲಿ ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳು 1400 ಕಿ.ಮೀ ನಷ್ಟಿದ್ದು, ಸದರಿ ರಸ್ತೆಗಳಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೆ ಮಾಡಿಸಲಾಗುವುದು. ಸರ್ವೇಯ ನಂತರ ಶೇ. 60ರಷ್ಟು ಕನ್ನಡ ಭಾಷೆ ಬಳಸದ ಮಳಿಗೆಗಳಿಗೆ ನೋಟಿಸ್‌ ನೀಡಲಾಗುವುದು. ನೋಟಿಸ್‌ ನಿಡಿದ ಬಳಿಕ ಫೆ. 28 ರವರೆಗೆ ಸಮಯಾವಕಾಶ ನೀಡಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲ ಕಗಳನ್ನು ಅಳವಡಿಸಿ ಅನುಷ್ಠಾನಗೊಳಿಸಿ ಆಯಾ ವಲಯ ಆಯುಕ್ತರಿಗೆ ಅನುಪಾಲನೆ ಸಲ್ಲಿಸಬೇ ಕೆಂದು ಸೂಚಿಸಲಾಗುವುದು ಎಂದು ಹೇಳಿದರು.

ಕಾನೂನು ಕ್ರಮ ಜರುಗಿಸಲಾಗುವುದು: ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಹಾಕದೇ ಇರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಆದೇಶ ಹಾಗೂ ಪಾಲಿಕೆ ಸುತ್ತೋಲೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಗಡುವಿಗೂ ಮುನ್ನ  ಕನ್ನಡ ನಾಮಫಲಕಗಳನ್ನು ಅಳವಡಿಕೆ ಮಾಡದ ಅಂಗಡಿ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಬಿಬಿಎಂಪಿ ವ್ಯಾಪ್ತಿಗೆ ಸೇರುವ ದೊಡ್ಡ ದೊಡ್ಡ ಮಾಲ್‌ಗ‌ಳ ಜೊತೆ ಕೂಡಲೆ ಸಮಾಲೋಚನೆ ನಡೆಸಲಾಗುವುದು. ಮಾಲ್‌ಗ‌ಳಲ್ಲಿರುವ ಎಲ್ಲಾ ಮಳಿಗೆಗಳಲ್ಲಿ 15-20 ದಿನಗಳೊಳಗಾಗಿ ನಾಮ ಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳ ಬೇಕು.ಇಲ್ಲವಾದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು. ಉಪ ಆಯುಕ್ತ  ಮಂಜುನಾಥ ಸ್ವಾಮಿ, ಮುಖ್ಯ ಅಭಿ ಯಂತರರಾದ ಪ್ರವೀಣ್‌ ಲಿಂಗಯ್ಯ ಇದ್ದರು.

Advertisement

ಬಿಬಿಎಂಪಿ ಎದುರು ಉಪವಾಸ ಸತ್ಯಾಗ್ರಹದ ಎಚ್ಚರಿಕೆ:

ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಪ್ರತಿಕ್ರಿಯೆ ನೀಡಿ, ಬೆಂಗಳೂರಿನ 8 ವಲಯಗಳ ಅಧಿಕಾರಿಗಳು ಸರಿಯಾಗಿ ಕೆಲಸಮಾಡಿಲ್ಲ. ಇದರಿಂದ ಕನ್ನಡಕ್ಕೆ ಕುತ್ತು ಬಂದಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಫೆ.28ರ ತನಕ ಗಡುವು ತೆಗೆದುಕೊಂಡಿದ್ದಾರೆ. ಆ ಗಡುವಿನೊಳಗೆ ಕ್ರಮ ತೆಗೆದುಕೊಳ್ಳದಿದ್ದರೆ ಬಿಬಿಎಂಪಿಯ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದರು.

ಡಿ.27ರಂದು ನಮ್ಮ ಹೋರಾಟ ನಡೆಯುತ್ತೆ. ದೇವನಹಳ್ಳಿ ವಿಮಾನನಿಲ್ದಾಣದ ಸಾದರಹಳ್ಳಿ ಟೋಲ್‌ನಿಂದ ಪ್ರತಿಭಟನೆ ಪ್ರಾರಂಭಿಸುತ್ತೇವೆ. ಅಲ್ಲಿಂದ ಕಬ್ಬನ್‌ ಪಾರ್ಕ್‌ ತನಕ ಮೆರವಣಿಗೆ ನಡೆಯುತ್ತೆ. ಈ ಕಾಯ್ದೆಯನ್ನ ಪಾಲಿಕೆಯೇ ಮಾಡಿದೆ. ನಿಯಮ ಉಲ್ಲಂ ಸಿದವರ ಬಗ್ಗೆ ಎಷ್ಟು ಕ್ರಮ ತೆಗೆದುಕೊಂಡಿದ್ದಾರೆ, ಎಷ್ಟು ದಂಡ ಹಾಕಿದ್ದಾರೆ ಅನ್ನೋದರ ವರದಿ ಕೇಳಿದ್ದೇವೆ. ಮಾಹಿತಿ ನೀಡೋದಾಗಿ ಕಮಿಷನರ್‌ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರಿಗೆ ಬಂದು ವ್ಯಾಪಾರ ಮಾಡಿ ಬದುಕುತ್ತಿರುವವರು ತಮ್ಮ ಮಳಿಗೆಗಳ ನಾಮಫ‌ಲಕಗಳಲ್ಲಿ ಶೇ. 60 ಕನ್ನಡ ಇರಬೇಕು ಎಂಬ ಕಾನೂನು ಇದೆ. ಅದನ್ನು ಪಾಲನೆ ಮಾಡಬೇಕು.-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next