ಬೆಂಗಳೂರು: ಶೇ.60ರಷ್ಟು ಕನ್ನಡ ಒಳಗೊಂಡ ನಾಮಫಲಕ ಅಳವಡಿಸಿಕೊಳ್ಳದಿರುವ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಕನ್ನಡಕ್ಕೆ ಗೌರವ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕ ಎಚ್ಚೆತ್ತುಕೊಂಡ ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ ಇಂಡಿಯಾ ಪ್ರೈ.ಲಿ ತನ್ನ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡಕ್ಕೆ ಆದ್ಯತೆ ನೀಡಿದೆ.
ಇತ್ತೀಚೆಗೆ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಸೂಚಿಸಿ ಬಿಬಿಎಂಪಿ ನೀಡಿರುವ ನೋಟಿಸ್ ರದ್ದುಪಡಿಸುವಂತೆ ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, “ನಾವು ಇರುವುದು ಕನ್ನಡ ನಾಡಿನಲ್ಲಿ, ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಿ ಪಾಲನೆ ಮಾಡಬೇಕು’ ಎಂದು ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ ಇಂಡಿಯಾ ಪ್ರೈ.ಲಿ ಕಂಪನಿಗೆ ಹೇಳಿತ್ತು.
ಕಂಪನಿಯ ನಡೆಯ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ “ಕನ್ನಡ ಗ್ರಾಹಕ ಕೂಟ’ ಟ್ವಿಟರ್‌ನಲ್ಲಿ “ನೋ ಕನ್ನಡ, ನೋ ಬ್ಯುಸಿನೆಸ್’ ಎಂಬ ಅಭಿಯಾನವನ್ನು ಹಮ್ಮಿಕೊಂಡಿತ್ತು. ಇದಕ್ಕೆ ಸಾರ್ವಜನಿಕರಿಂದಲೂ ಬೆಂಬಲ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪನಿ ನಗರದ ವೈಟ್‌ಫೀಲ್ಡ್, ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಯಶವಂತರ ಪುರದ ತನ್ನ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಿಕೊಂಡಿದೆ.
ಜತೆಗೆ ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ, ಭಾರತದಾದ್ಯಂತ ಇರುವ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯನ್ನು ಗೌರವಿಸುತ್ತಿದೆ. ಬೆಂಗಳೂರಿನಲ್ಲಿರುವ ಸಂಸ್ಥೆಯ ಮಳಿಗೆಗಳ ನಾಮಫಲಕದಲ್ಲಿ ಕನ್ನಡ ಪ್ರಧಾನವಾಗಿ ಬಳಸಲಾಗುವುದು. ರಾಜ್ಯ ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಗೌರವಿಸಿ ಪಾಲಿಸುತ್ತೇವೆ ಎಂದು ತನ್ನ ಸಂಸ್ಥೆಯ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ಸರ್ಕಾರ ರೂಪಿಸುವ ನೀತಿಯ ವಿರುದ್ಧ ಕೋರ್ಟ್ ಮೊರೆ ಹೋಗುವವರಿಗೆ ತಕ್ಕ ಪಾಠವಾಗಿಲಿದೆ ಎನ್ನುವುದಕ್ಕೆ ಈ ಪ್ರಕರಣ ಒಂದು ನಿದರ್ಶನ.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ