ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಮೇವನ್ನರಸಿ ನಾಡಿಗೆ ಬಂದಿರುವ 6 ಸಲಗಗಳು ಕಾಡಂಚಿನ ಗ್ರಾಮಸ್ಥರು ಬೆಳೆದಿದ್ದ ಬೆಳೆಗಳನ್ನು ತಿಂದು ತುಳಿದು ನಾಶಪಡಿಸಿವೆ. ಆದರೆ ಅವುಗಳನ್ನು ಮರಳಿ ಕಾಡಿಗಟ್ಟಲು ಅರಣ್ಯ ಇಲಾಖೆಯ ಶ್ರಮಕ್ಕೆ ಜನರ ಕುತೂಹಲ ಅಡ್ಡಿಯಾಗುತ್ತಿದೆ.
ಹುಣಸೂರು ತಾಲೂಕಿನ ಗುರು ಪುರದ ಬಳಿಯ ಕುರುಚಲು ಕಾಡಿನಲ್ಲಿ ಆಶ್ರಯ ಪಡೆದಿರುವ 6 ಸಲಗಗಳ ಹಿಂಡು ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದಿಂದ ಸೋಮವಾರ ರಾತ್ರಿ ಹೊರ ದಾಟಿ, ಕಾಡಂಚಿನ ರೈತರ ರಾಗಿ, ಜೋಳ, ಬಾಳೆ ಬೆಳೆಗಳನ್ನು ತಿಂದು ತುಳಿದು ಹಾಳು ಮಾಡಿದ್ದಲ್ಲದೆ, ಹೊಟ್ಟೆ ತುಂಬ ಆಹಾರ ಸಿಕ್ಕ ಖುಷಿಯಲ್ಲಿ ಹೊಲದಲ್ಲೇ ಠಿಕಾಣಿ ಹೂಡಿದ್ದವು.
ಗೋವಿಂದನಾಯ್ಕರ ಜೋಳದ ಹೊಲದಲ್ಲಿ ಆನೆಗಳಿವೆ ಎಂಬ ಸುದ್ದಿ ಬೆಳಗ್ಗೆ 5ರ ಹರಡಿತು. ಕೂಡಲೇ ರೈತರು ದನಗಳನ್ನು ಅಟ್ಟುವಂತೆ ಕಾಡಿನ ಕಡೆಗೆ ಓಡಿಸಲು ಪ್ರಯತ್ನಿಸಿದರು. ಇದರಿಂದ ಗಾಬರಿ ಬಿದ್ದ ಆನೆಗಳು ಕೆರೆ ಬಯಲಿನಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದವು. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಪಕ್ಕದ ಕುರುಚಲು ಕಾಡಿಗೆ ಸೇರಿಸಿದರು.
ಕಾಡಾನೆಗಳ ದಂಡು ಒಂದೇ ರಾತ್ರಿಯಲ್ಲಿ ಗ್ರಾಮದ ಮಹದೇವಮರ ಎರಡೂವರೆ ಎಕರೆ ಜೋಳ, ಗೋವಿಂದ ನಾಯ್ಕರ 600ಕ್ಕೂ ಹೆಚ್ಚು ಬಾಳೆಗಿಡ, ಚಿಕ್ಕೇಗೌಡರ ಎರಡೂವರೆ ಎಕರೆ ರಾಗಿ, ಚಡ್ಡಿನಾಗಣ್ಣನವರ ರಾಗಿ ಬೆಳೆ, ಅಣ್ಣಯ್ಯಶೆಟ್ಟಿರ ಅರ್ಧ ಎಕರೆ ರಾಗಿಬೆಳೆ ತಿಂದು ತುಳಿದು ನಾಶಪಡಿಸಿದ್ದು, ಸುಮಾರು 3 ಲಕ್ಷರೂ ನಷ್ಟ ಉಂಟು ಮಾಡಿವೆ.
ಎಚ್ಚರಿಕೆ: ಕುರುಚಲು ಕಾಡಿಗೆ ಸಲಗಗಳು ಸೇರುತ್ತಿದ್ದಂತೆ ಅರಣ್ಯ ಇಲಾಖೆ ಜೀಪ್ ಮುಖಾಂತರ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮೈಕ್ ಮೂಲಕ ಜಮೀನಿಗೆ ತೆರಳದಂತೆ ಸಾರ ಲಾಯಿತು. ಇದರಿಂದ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಆನೆಗಳನ್ನು ಹತ್ತಿರದಿಂದ ನೋಡಲು ಪ್ರಯತ್ನಿಸಿ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡಿದರು.
ಆನೆಗಳು ಅರಣ್ಯ ಸೇರದಿರುವ ಹಿನ್ನೆಲೆಯಲ್ಲಿ ಡಿಸಿಎಫ್ ಬಾಲ ಚಂದರ್, ಎಸಿಎಫ್ಗಳಾದ ಸೋಮಪ್ಪ, ಪ್ರಸನ್ನಕುಮಾರ್, ಆರ್‌ಎಫ್ಒ ಗಳಾದ ಮಧುಸೂದನ್, ಗಿರೀಶ್, ಶಿವಶಂಕರಸ್ವಾಮಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.