ಬೆಂಗಳೂರು: ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕೆಲಸ ಕೊಡಿಸುವುದಾಗಿ ಸರ್ಕಾರದ ಲೆಟರ್‌ಹೆಡ್‌ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ನಕಲಿ ಸಹಿ ಹಾಕಿಸಿ ಆಫರ್ ಲೇಟರ್ ನೀಡಿ ಯವತಿಯೊಬ್ಬರಿಂದ 6 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಪ್ರಾಧ್ಯಾಪಕನೊಬ್ಬನನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂದಿಸಿದ್ದಾರೆ.
ವಂಚನೆ ಪ್ರಕರಣದಲ್ಲಿ ಮೈಸೂರಿನ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ನಾಗರಾಜ್ ಬಂಧಿತ ಆರೋಪಿ. ಮೈಸೂರಿನ ಪಲ್ಲವಿ (26) ವಂಚನೆಗೊಳಗಾದ ಯುವತಿ. ಡಿಟಿಪಿ ಸೆಂಟರ್‌ವೊಂದರಲ್ಲಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದ ಪಲ್ಲವಿಗೆ ಮಹಾರಾಣಿ ಕಾಲೇಜಿನಲ್ಲಿ ಎಫ್ಡಿಎ ಹುದ್ದೆ ಕೊಡಿಸುವುದಾಗಿ ನಂಬಿಸಿ ಆರೋಪಿ ನಾಗರಾಜ್ ಯುವತಿಯಿಂದ 6 ಲಕ್ಷ ರೂ. ವಂಚಿಸಿದ್ದಾನೆ. ಇದಕ್ಕಾಗಿ ಸರ್ಕಾರದ ಲೆಟರ್ ಹೆಡ್‌ನಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ನಕಲಿ ಸಹಿ ಹಾಕಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆ ಹೇಗೆ?: ಪಲ್ಲವಿ ಮೈಸೂರಿನ ಡಿಟಿಪಿ ಸೆಂಟರ್‌ವೊಂದರಲ್ಲಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದಾರೆ. ಪತ್ರವೊಂದನ್ನು ಟೈಪ್ ಮಾಡಿಸಲು ಇದೇ ಡಿಟಿಪಿ ಸೆಂಟರ್‌ಗೆ ಬಂದ ಪ್ರಾಧ್ಯಾಪಕ ನಾಗರಾಜ್, ಪಲ್ಲವಿಯನ್ನು ಪರಿಚಯ ಮಾಡಿಕೊಂಡಿದ್ದ. ಪರಿಚಯವಾಗಿದ್ದ ನಾಗರಾಜ್ ನನ್ನು ಬೇರೆಡೆ ಕೆಲಸವಿದ್ದರೆ ಹೇಳಿ ಎಂದು ಪಲ್ಲವಿ ಕೇಳಿದ್ದರು.
ಇದನ್ನೂ ಓದಿ;- ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣವೆಂದು ಜನರಿಗೆ ಗೊತ್ತಾಗಲಿ: ಎಚ್ ಡಿಕೆ
ಮಹಾರಾಣಿ ಕಾಲೇಜಿನಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ ಆರೋಪಿ, ಅದಕ್ಕಾಗಿ ಆರು ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಇದಕ್ಕೊಪ್ಪಿದ ಪಲ್ಲವಿ ಆರು ಲಕ್ಷ ರೂ. ನೀಡಿದ್ದರು. ಹಣ ಪಡೆದ ಆರೋಪಿ, ಬೇರೊಂದು ಬ್ರೌಸಿಂಗ್ ಸೆಂಟರ್‌ನಲ್ಲಿ ಸರ್ಕಾರದ ಲೆಟರ್ ಹೆಡ್ ಬಳಸಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಕಲಿ ಸಹಿ ಹಾಕಿ ಮಹಾರಾಣಿ ಕಾಲೇಜಿನಲ್ಲಿ ಎಫ್ ಡಿಎ ಎಂದು ನಮೂದಿಸಿ ಆಫರ್ ಲೆಟರ್ ನೀಡಿದ್ದ.
ದಾಖಲೆ ಪರಿಶೀಲನೆಗೆಂದು ಯುವತಿಯು ತಾಯಿಯ ಜತೆಗೆ ಎಂ.ಎಸ್ ಬಿಲ್ಡಿಂಗ್‌ಗೆ ಬಂದಿ ದ್ದಾರೆ. ಈ ವೇಳೆ ಆಫರ್ ಲೆಟರ್‌ನಲ್ಲಿರುವುದು ಪ್ರಧಾನ ಕಾರ್ಯದರ್ಶಿ ನಕಲಿ ಸಹಿಯಾಗಿದ್ದು, ಮೋಸ ಹೋಗಿರುವುದಾಗಿ ಯುವತಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಕೂಡಲೇ ಪ್ರಧಾನ ಕಾರ್ಯದರ್ಶಿ ಅವರ ಸಹಿಯನ್ನು ನಕಲು ಮಾಡಿರುವ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿ ಎಸ್. ಎನ್. ಪದ್ಮಿನಿ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ, ಆರೋಪಿಯನ್ನು ಬಂಧಿಸಿರುವ ವಿಧಾನಸೌಧ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.