Advertisement

6 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅಸ್ತು!

10:08 AM Apr 13, 2022 | Team Udayavani |

ಬಜಪೆ: ಕೆರೆ, ನದಿಗಳಿಲ್ಲದ ಪಡುಪೆರಾರ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ಕಿಂಡಿ ಅಣೆಕಟ್ಟುಗಳೇ ಜೀವಾಳ. ಗಂಜಿಮಠದಿಂದ ಹರಿಯುವ ಎಕ್ಕಾರು ನಳಿನಿ ನದಿಯೇ ಇಲ್ಲಿನ ಪ್ರಮುಖ ತೋಡಾಗಿದ್ದು ಇದೇ ನೀರಿನ ಆಧಾರವಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಕೇವಲ ನಾಲ್ಕು ಕಿಂಡಿ ಅಣೆಕಟ್ಟುಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಈಗ ಹೊಸದಾಗಿ 6 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಗ್ರೀನ್‌ ಸಿಗ್ನಲ್‌ ದೊರೆತಿದೆ. ಇದಕ್ಕಾಗಿ ಪಶ್ವಿ‌ಮ ವಾಹಿನಿ ಯೋಜನೆಯಡಿ ಸುಮಾರು 8.99 ಕೋ.ರೂ. ಅನುದಾನ ಬಿಡುಗಡೆಯಾಗಿದೆ.

Advertisement

ಈ ಆರು ನೂತನ ಕಿಂಡಿ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಮೂಡುಪೆರಾರ ಹಾಗೂ ಪಡುಪೆರಾರ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಇದರಿಂದಾಗಿ ಕುಡಿಯುವ ನೀರು ಮತ್ತು ಕೃಷಿಗೆ ಪೂರಕವಾಗಲಿದೆ. ಮೂಡುಪೆರಾರ ಗ್ರಾಮದ ಮುಂಡಬೆಟ್ಟು,ಪರಾರಿ ಕಟ್ಟ, ಪಡುಪೆರಾರ ಗ್ರಾಮದ ಶೆಟ್ಟಿ ಬೆಟ್ಟು, ಗುರುಂಪೆ ಕಿಂಡಿ ಅಣೆಕಟ್ಟು ಈಗಾಗಲೇ ಕಿಂಡಿ ಅಣೆಕಟ್ಟು ಕಾರ್ಯನಿರ್ವಹಿಸುತ್ತಿವೆ. ಹರಿಯುವ ಒಂದು ತೋಡಿಗೆ 10 ಕಿಂಡಿ ಅಣೆಕಟ್ಟುಗಳ ನಿರ್ಮಾಣದಿಂದ ಬಿರು ಬೇಸಗೆಯ ನೀರಿನ ಬವಣೆಯನ್ನು ಸಮರ್ಥವಾಗಿ ಎದುರಿಸಲು ಪಡುಪೆರಾರ ಗ್ರಾ.ಪಂ. ಸರ್ವ ಸನ್ನದ್ಧವಾಗಿದೆ. ಪಡುಪೆರಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿಲ್ಲ, ಇಲ್ಲಿ 37 ಕೊಳವೆ ಬಾವಿಗಳೇ ನೀರಿನ ಆಧಾರ. ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಹಾಗೂ ಬಿರು ಬೇಸಗೆಯಿಂದಾಗಿ ಮೇ ತಿಂಗಳ ಅಂತ್ಯದವರೆಗೆ ಕೆಲವೆಡೆ ನೀರಿನ ಸಮಸ್ಯೆ ಉದ್ಭವಿಸುತ್ತದೆ.

ಒಂದು ತೋಡಿಗೆ 10 ಕಿಂಡಿ ಅಣೆಕಟ್ಟು

ಪಡುಪೆರಾರ ಗ್ರಾ.ಪಂ.ನ ಮೂಡು ಪೆರಾರ ಹಾಗೂ ಪಡುಪೆರಾರ ಗ್ರಾಮದಲ್ಲಿ ಹರಿಯುವ ಒಂದು ತೋಡಿಗೆ 6 ಹೊಸ ಕಿಂಡಿಅಣೆಕಟ್ಟುಗಳ ನಿರ್ಮಾಣದಿಂದ ಒಟ್ಟು 10 ಕಿಂಡಿ ಅಣೆಕಟ್ಟುಗಳಲ್ಲಿ ನೀರು ಶೇಖರಣೆ ಮಾಡಬಹುದಾಗಿದೆ. ಬಹೋಪಯೋಗಿ ಇತಿಹಾಸ ಪ್ರಸಿದ್ಧವಾದ ಕುಡುಂಬುದಕಟ್ಟ ಕಿಂಡಿ ಅಣೆಕಟ್ಟು ಶಿಥಿಲಾವಸ್ಥೆಯಲ್ಲಿತ್ತು. ಹೊಸ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನೀರು ಸುಮಾರು 6 ಕಿ.ಮೀ. ದೂರ ಕಬೆತಿಗುತ್ತಿನವರೆಗೆ ಕೃಷಿಗೆ ಅನುಕೂಲವಾಗಲಿದೆ. ಕಿನ್ನಿಪಚ್ಚಾರ್‌, ಪರಾರಿ ಪ್ರದೇಶದ ಕೃಷಿ ಹಾಗೂ ಕುಡಿಯುವ ನೀರಿಗೆ ಅತೀ ಅವಶ್ಯಕವಾಗಿದೆ.

ಬಹುಪಯೋಗಿ ಶೆಟ್ಟಿಬೆಟ್ಟು ಕಿಂಡಿ ಅಣೆಕಟ್ಟಿನಲ್ಲಿ ಈಗಾಗಲೇ 2 ಅಡಿಯಷ್ಟು ನೀರು ಕೆಳಕ್ಕೆ ಹೋಗಿದೆ. ಒಮ್ಮೆ ಮಳೆಯಾಗಿದ್ದರೂ ಕೂಡ ಏರಿಕೆ ಕಂಡಿಲ್ಲ. ಇಲ್ಲಿನ ನಾಗಬ್ರಹ್ಮ ಯುವಕ ಮಂಡಲ ಸದಸ್ಯರಿಂದ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿ ಶ್ರಮದಾನ ಕೈಗೊಂಡರು.

Advertisement

ಬಹುಗ್ರಾಮ ಕುಡಿಯವ ನೀರಿನ ಯೋಜನೆ ಜಾರಿಯಾಗಲಿ

ಗ್ರಾ.ಪಂ. ವ್ಯಾಪ್ತಿಯಲ್ಲಿ 6 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಾಸಕ ಡಾ| ಭರತ್‌ ಶೆಟ್ಟಿ ಅವರು ಅನುದಾನ ನೀಡಿದ್ದಾರೆ. ಇದರಿಂದಾಗಿ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅಗತ್ಯವಾಗಿ ಜಾರಿ ಮಾಡಬೇಕಿದೆ. ಅಮಿತಾ ಮೋಹನ್‌ ಶೆಟ್ಟಿ, ಅಧ್ಯಕ್ಷರು, ಪಡುಪೆರಾರ ಗ್ರಾ.ಪಂ

– ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next