Advertisement

ರಾಜಧಾನಿಯ 6 ನಕಲಿ ಕಂಪನಿಗಳ ಮೇಲೆ ಇಡಿ ದಾಳಿ

10:57 AM Apr 02, 2017 | Team Udayavani |

ಬೆಂಗಳೂರು: ಹೊಸದಾಗಿ ಕಂಪನಿಗಳನ್ನು ಸ್ಥಾಪಿಸುವುದಾಗಿ ನಂಬಿಸಿ ಬ್ಯಾಂಕ್‌ ಸಾಲ ಹಾಗೂ ಸಾರ್ವ ಜನಿಕರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ವಂಚನೆ ಎಸಗುತ್ತಿದ್ದ ನಗರದ 6 ನಕಲಿ (ಶೆಲ್‌) ಕಂಪನಿಗಳಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

Advertisement

ಬೆಂಗಳೂರು ಇಡಿ ಘಟಕದ ಅಧಿಕಾರಿಗಳು, ಹಣ ದುರ್ಬಳಕೆ ನಿಯಂತ್ರಣ ಕಾಯ್ದೆ (ಪಿಎಂಎಲ…ಎ) ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್ ಇಎಂಎ) ಅನ್ವಯ ವಸಂತನಗರದಲ್ಲಿನ ರಿಪಲ್‌ ಇನ್ವೆಸ್‌ ಮೆಂಟ್‌, ನಂ. 2 ಆರ್‌ಆರ್‌ ಛೇಂಬರ್ ಕಚೇರಿ, ಇದೇ ಶಾಖೆಯ ಬನಶಂಕರಿಯಲ್ಲಿರುವ ಮತ್ತೂಂದು ಕಚೇರಿ, ಜೆ.ಡಿ ಇನ್ವೆಸ್ಟ್‌ ಮೆಂಟ್‌ ಹಾಗೂ ನಗರದ ವಿವಿಧೆಡೆ ಬೇರೆ ಬೇರೆ ಹೆಸರುಗಳಲ್ಲಿ ಸ್ಥಾಪಿತಗೊಂಡಿದ್ದ 6 ಕಂಪನಿಗಳಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ  ಕೋಟ್ಯಂತರ ರೂ. ದುರ್ಬಳಕೆ, ಸಾರ್ವಜನಿಕರಿಗೆ ವಂಚನೆ, ತೆರಿಗೆ ವಂಚನೆ ಸಂಬಂಧ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

ದಾಳಿಗೊಳಗಾದ ರಿಪಲ್‌ ಇನ್ವೆಸ್ಟ್‌ಮೆಂಟ್‌ ಹಾಗೂ ಇತರೆ ನಕಲಿ ಕಂಪನಿಗಳನ್ನು ಜಿ. ಧನಂಜಯ್‌ ರೆಡ್ಡಿ ಎನ್ನುವವರು ಬೇನಾಮಿ ಹೆಸರಿನಲ್ಲಿ ಸ್ಥಾಪಿಸಿಕೊಂಡಿದ್ದಾರೆ. ಈ ರೀತಿ ಕಂಪನಿಗಳ ಸ್ಥಾಪನೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದುಕೊಳ್ಳುತ್ತಿದ್ದರು. ಅದೇ ರೀತಿ ಸಾರ್ವಜನಿಕರಿಂದಲೂ ಹಣ ಹೂಡಿಕೆ ಮಾಡಿಸುತ್ತಿದ್ದರು. ಈ ರೀತಿ ಸಂಗ್ರಹವಾದ ಸುಮಾರು 70 ಕೋಟಿ ರೂ. ಹಣ ದುರ್ಬಳಕೆ ಹಾಗೂ ತೆರಿಗೆ
ವಂಚಿಸಿದ್ದಾರೆ. ಅಲ್ಲದೆ ಹಲವು ವರ್ಷಗಳಿಂದ ಇದೇ ಕಸುಬಾಗಿಸಿಕೊಂಡಿದ್ದ ಧನಂಜಯ್‌ ರೆಡ್ಡಿ, ನಗರದಲ್ಲಿ 15ಕ್ಕೂ ಹೆಚ್ಚು ನಕಲಿ ಕಂಪನಿಗಳನ್ನು ಸ್ಥಾಪಿಸಿರುವ ಮಾಹಿತಿಯಿದೆ ಎಂದು ಬೆಂಗಳೂರಿನ ಇಡಿ ಘಟಕದ ಉನ್ನತ ಅಧಿಕಾರಿಗಳು    “ಉದಯವಾಣಿ’ಗೆ ತಿಳಿಸಿದ್ದಾರೆ. ಸದ್ಯ ದಾಳಿ ವೇಳೆ ದೊರೆತ ದಾಖಲೆಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.

ಈ ಪ್ರಕ್ರಿಯೆ ಮುಗಿದ ಬಳಿಕ ಆರೋಪಿಯನ್ನು ಅಗತ್ಯವಿದ್ದರೆ ಬಂಧಿಸಲಾಗುತ್ತದೆ. ಬೆಂಗಳೂರಿನಾದ್ಯಂತ ಶೆಲ್‌ ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯಿದ್ದು, ಈ ವ್ಯವಸ್ಥಿತ ಜಾಲದ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನಿದು ಶೆಲ್‌ ಕಂಪನಿಗಳು?
ಕಡಿಮೆ ಮೊತ್ತದ ಬಂಡವಾಳದಿಂದ ಸ್ಥಾಪನೆಯಾದ, ಪಟ್ಟಿಯಲ್ಲಿಲ್ಲದ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ, ಡಿವಿಡೆಂಡ್‌ ಆದಾಯ ಇಲ್ಲದಿರುವ, ಕೈಯಲ್ಲೇ ಸಾಕಷ್ಟು ನಗದು ಹೊಂದಿರುವ, ಖಾಸಗಿ ಕಂಪನಿಗಳೇ ಬಹುತೇಕ ಷೇರುದಾರರಾಗಿರುವ ಕಂಪನಿಗಳೇ ಶೆಲ್‌ ಕಂಪನಿಗಳು. ಅವುಗಳ ವಹಿವಾಟು ಪ್ರಮಾಣ ಮತ್ತು ಕಾರ್ಯ ನಿರ್ವಹಣಾ ಆದಾಯ ಕಡಿಮೆ ಇರುತ್ತದೆ. ಅವುಗಳಿಗೆ ನೆಪ ಮಾತ್ರಕ್ಕೆ ಶುಲ್ಕ ಪಾವತಿ ಇರುತ್ತದೆ. ಷೇರು ಪೇಟೆಗಳಲ್ಲಿಯೂ ಕನಿಷ್ಠ ಪ್ರಮಾಣದ ವಹಿವಾಟು ಇರುತ್ತದೆ. ಜತೆಗೆ ಸ್ಥಿರ ಆಸ್ತಿ ಪ್ರಮಾಣ ಕಡಿಮೆ ಇರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next