ನವದೆಹಲಿ: ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ 8 ಸಾವಿರಕ್ಕೂ ಅಧಿಕ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಈ ಪೈಕಿ 6 ಮಂದಿ ಮಾತ್ರ ಗೆಲುವಿನ ನಗೆ ಚೆಲ್ಲಿದ್ದಾರೆ.
ಅಬ್ದುಲ್ ರಶೀದ್ ಶೇಖ್: ಇಂಜಿನಿಯರ್ ರಶೀದ್ ಎಂದೇ ಖ್ಯಾತರಾದ ಶೇಖ್, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನು ಬರೊಬ್ಬರಿ 1.86 ಲಕ್ಷ ಮತಗಳಿಂದ ಸೋಲಿಸಿದ್ದಾರೆ.
ಸರಬ್ಜಿತ್ ಸಿಂಗ್ ಖಾಲ್ಸಾ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಗೈದ ಇಬ್ಬರು ಹಂತಕರ ಪೈಕಿ ಒಬ್ಬನಾದ ಬಿಯಂತ್ ಸಿಂಗ್ ಪುತ್ರನಾದ ಈತ ಪಂಜಾಬ್‌ನ ಫರೀದ್‌ಕೋಟ್‌ನಿಂದ ಜಯ ಗಳಿಸಿದ್ದಾರೆ. ಈತ 2014, ಮತ್ತು 2019ರ ಚುನಾವಣೆಯಲ್ಲಿ ಸ್ಫರ್ಧಿಸಿ ಸೋಲುಂಡಿದ್ದರು.
ಅಮೃತ್‌ಪಾಲ್ ಸಿಂಗ್: ಮೂಲಭೂತವಾದಿ ಸಿಖ್ ಧರ್ಮಗುರು, ವಾರಿಸ್ ಪಂಜಾಬ್ ದೇ ಸಂಘಟನೆ ಮುಖ್ಯಸ್ಥರಾದ ಸಿಂಗ್, ಪಂಜಾಬ್‌ನ ಖದೂರ್ ಸಾಹಿಬ್ ಕ್ಷೇತ್ರದಿಂದ ವಿಜಯ ಸಾಧಿಸಿದ್ದಾರೆ. ಸದ್ಯ ಎನ್‌ಎಸ್‌ಎ ಕಾಯ್ದೆಯಡಿ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾರೆ. ಜೈಲಿನಿಂದಲ್ಲೇ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದಾರೆ.
ವಿಕಾಸ್ ಪ್ರಕಾಶ್ ಬಾಪು ಪಾಟೀಲ್: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾದ ಇವರು, ಮಹಾರಾಷ್ಟ್ರದ ಸಾಂಗ್ಲಿ ಕ್ಷೇತ್ರದಿಂದ 93 ಸಾವಿರ ಮತಗಳ ಅಂತರದಿಂದ ಶಿವಸೇನೆ (ಠಾಕ್ರೆ) ಅಭ್ಯರ್ಥಿಯನ್ನು ಸೋಲಿಸಿ ಆಯ್ಕೆಯಾಗಿದ್ದಾ ರೆ. ಇವರು ಮಾಜಿ ಮುಖ್ಯಮಂತ್ರಿ ವಸಂತ್ ದಾದಾ ಪಾಟೀಲ್ ಮೊಮ್ಮಗ.
ಹನೀಫಾ ಮತ್ತು ಉಮೇಶ್ ಭಾಯಿ: ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ತೊರೆದು ಲಡಾಕ್‌ನಿಂದ ಸ್ಪರ್ಧಿಸಿದ್ದ ಮೊಹಮದ್ ಹನೀಫಾ ಜಾನ್ ಮತ್ತು ದಿಯು ಮತ್ತು ದಮನ್‌ನಿಂದ ಸ್ಪರ್ಧಿಸಿದ್ದ ಪಟೇಲ್ ಉಮೇಶ್ ಭಾಯ್ ಬಾಹುಭಾಯ್ ಜಯ ಗಳಿಸಿದ್ದಾರೆ.
2019ರಲ್ಲಿ ಕೇವಲ 4 ಜನ ಮಾತ್ರ ಸ್ವತಂತ್ರವಾಗಿ ನಿಂತು ಜಯ ಗಳಿಸಿದ್ದರು. ಅತಿ ಹೆಚ್ಚು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದ ದಾಖಲೆ 1951ರಲ್ಲಿ ಇದೆ.