Advertisement

ಕುಳಿತಲ್ಲೇ 6 ಕೋಟಿ ರೂ. ಯೋಜನೆ ರೂಪಿಸಿದ್ರು!

09:13 PM Feb 26, 2020 | Lakshmi GovindaRaj |

ಹುಣಸೂರು: ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ಗಳು ಸಿದ್ಧಪಡಿಸಿದ್ದ 6 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಕಾಮಗಾರಿಗಳ ಪಟ್ಟಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಮಕ್ಕಿಕಾಮಕ್ಕಿ ಲೆಕ್ಕಿ ನೀಡುತ್ತಿದ್ದೀರಾ, ಯಾವ ಪಂಚಾಯ್ತಿಗೆ ಹೋಗಿ ಸಮಸ್ಯೆ ಪರಿಶೀಲಿಸಿದ್ದೀರಾ? ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ತರಾಟೆಗೆ ತೆಗೆದುಕೊಂಡರು.

Advertisement

ನಗರಸಭೆ ಸಭಾಂಗಣದಲ್ಲಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಮ್ಮ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತುರ್ತು ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಇದೇ ವೇಳೆ, ಎಂಜಿನಿಯರ್‌ಗಳು ನಮ್ಮ ಗ್ರಾಮಗಳಿಗೆ ಬಂದಿಲ್ಲ ಎಂದು ಗ್ರಾಪಂ ಪಿಡಿಒಗಳು ದೂರು ನೀಡಿದರು. ಇದರಿಂದ ಕೆರಳಿದ ಶಾಸಕರು, ಎಲ್ಲೋ ಕುಳಿತು ಮಾಡಿರುವ ಪಟ್ಟಿಯಂತಿದೆ. ಗ್ರಾಮಕ್ಕೆ ಭೇಟಿ ನೀಡಿ ಸ್ಥಳಪರಿಶೀಲಿಸಿ, ಮರು ಪ್ರಸ್ತಾವನೆ ಸಲ್ಲಿಸಿ ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.

ತಾಲೂಕಿಗೆ 96 ಬೋರ್‌ವೆಲ್‌ಗ‌ಳು ಮಂಜೂರಾಗಿರುವ ಮಾಹಿತಿ ಇದೆ. ಯಾರೂ, ಎಲ್ಲಿ, ಏಕೆ ಬೋರ್‌ವೆಲ್‌ ಕೊರೆಸುತ್ತಿದ್ದಾರೆ ಎಂಬುದೇ ತಿಳಿಯದಾಗಿದೆ. ಪಿಡಿಒಗಳ ಗಮನಕ್ಕೂ ಬರುತ್ತಿಲ್ಲ, ಗುತ್ತಿಗೆದಾರರು ಇಷ್ಟಬಂದ ಕಡೆ ಕೊರೆಸುತ್ತಿರುವುದು ಕಂಡು ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮುಳ್ಳೂರಿನ ಪಿಡಿಒ ಸಂತೋಷ್‌ ಎಷ್ಟೇ ಸೂಚಿಸಿದರೂ ತಮಗಿಷ್ಟ ಬಂದಕಡೆ ಗುತ್ತಿಗೆದಾರರು ಬೋರ್‌ವೆಲ್‌ ಕೊರೆದಿದ್ದಾರೆಂದಾಗ ಎಂಜಿನಿಯರ್‌ಗಳು ಅಗತ್ಯವಿರುವೆಡೆ ಮಾತ್ರ ಪಿಡಿಒಗಳ ಮಾಹಿತಿ ಪಡೆದು ಕೊರೆಸಬೇಕೆಂದು ಶಾಸಕರು ಆದೇಶಿಸಿದರು.

ಬೇಸಿಗೆ ಆರಂಭವಾಗಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಪಂ ಕುಡಿಯುವ ನೀರಿನ ಯೋಜನೆಯ ಎಂಜಿನಿಯರ್‌ಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕೆಂದು ತಾಕೀತು ಮಾಡಿದರು. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.

ಇಲ್ಲಿ ಎರಡೂ ಇಲಾಖೆಗಳ ನಡುವೆ ಸಮನ್ವಯತೆ ಕಂಡುಬರುತ್ತಿಲ್ಲ, ಹೀಗಾಗಿ ಅಗತ್ಯವಿಲ್ಲದಿದ್ದರೂ ಅನವಶ್ಯಕವಾಗಿ ಕ್ರಿಯಾಯೋಜನೆ ತಯಾರಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಪಟ್ಟಿಯಲ್ಲಿ ಸೇರದಿರುವುದು ಕಂಡು ಬಂದಿದೆ. ಸೂಕ್ತ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಿ, ಕಾರ್ಯಕ್ರಮ ರೂಪಿಸಬೇಕು. ಇಲ್ಲದಿದ್ದಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಎಚ್ಚರಿಸಿದರು.

Advertisement

ಅಗತ್ಯ ಕ್ರಮ ವಹಿಸಬೇಕು: ತಾಲೂಕಿನ ಗಾಗೇನಹಳ್ಳಿ, ಅರಸುಕಲ್ಲಹಳ್ಳಿ, ಹುಸೇನ್‌ಪುರ, ಹಳೇಬೀಡು, ಬನ್ನಿಕುಪ್ಪೆ, ಕಡೇಮನುಗನಹಳ್ಳಿ, ಉಮ್ಮತ್ತೂರು, ದೊಡ್ಡಹೆಜೂರು, ಚಿಕ್ಕಬೀಚನಹಳ್ಳಿ, ಬನ್ನಿಕುಪ್ಪೆ, ಜಾಬಗೆರೆ, ಗುರುಪುರ, ಚಲ್ಲಹಳ್ಳಿ, ಗೊವಿಂದನಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಆಗಬೇಕಿರುವ ಪುನಶ್ಚೇತನ ಕಾಮಗಾರಿಗಳ ಬಗ್ಗೆ ಸಂಬಂಧಿಸಿದ ಪಿಡಿಒಗಳು ಮಾಹಿತಿ ನೀಡಿದರು. ಈ ವೇಳೆ ಅತ್ಯಗತ್ಯವಾಗಿರುವ 6 ಗ್ರಾಮಗಳಲ್ಲಿ ತುರ್ತಾಗಿ ಕಾಮಗಾರಿ ಕೈಗೊಳ್ಳಬೇಕೆಂದು ಕುಡಿಯುವ ನೀರು ಯೋಜನೆ ಇಲಾಖೆಯ ಎಇಇ ರಮೇಶ್‌ ಹಾಗೂ ಎಂಜಿನಿಯರ್‌ಗಳಾದ ಸಿದ್ದಪ್ಪ, ನಾಗರಾಜ್‌, ಸಚ್ಚಿನ್‌ ಅವರಿಗೆ ಸೂಚನೆ ನೀಡಿದರು.

ಜಾಬಗೆರೆ ನೀರಿನ ಸಮಸ್ಯೆ ನೀಗಿಸಿ: ತಮ್ಮ ಹಿಂದಿನ ಅವಧಿಯಲ್ಲಿ ಚಾಲನೆಗೊಂಡ ಜಾಬಗೆರೆಗೆ ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕಾವೇರಿ ನೀರು ಪೂರೈಕೆ ಸ್ಥಗಿತಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಬಯಸಿದಾಗ ವಾಲ್‌ ಕೆಟ್ಟಿದೆ. ನಗರಸಭೆಯವರಿಗೆ ದುರಸ್ತಿಗೆ ಕೋರಿದರೆ ನೀವೇ ಮಾಡಿಕೊಳ್ಳಬೇಕೆನ್ನುತ್ತಾರೆಂದು ಸಭೆಗೆ ಪಿಡಿಒ ತಿಳಿಸಿದಾಗ,

ನಗರಸಭೆ ಎಂಜಿನಿಯರ್‌ ಅನುಪವ ಅವರಿಗೆ ದುರಸ್ತಿಗೆ ತಾಂತ್ರಿಕ ಸಲಹೆ ನೀಡಿ, ಗ್ರಾಪಂನವರಿಗೆ ಸಹಕರಿಸಿ, ಇನ್ನು ನಾಲ್ಕು ದಿನದೊಳಗೆ ನೀರು ಪೂರೈಸಲು ಕ್ರಮವಹಿಸಬೇಕೆಂದು ಶಾಸಕರು ತಾಕೀತು ಮಾಡಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಗೌರಮ್ಮ, ಸದಸ್ಯ ಕಟ್ಟನಾಯಕ, ತಾಪಂ ಅಧ್ಯಕ್ಷೆ ಪದ್ಮಮ್ಮ, ಸದಸ್ಯೆ ರಾಜೇಂದ್ರಬಾಯಿ, ನಗರಸಭೆ ಸದಸ್ಯರಾದ ಸ್ವಾಮಿಗೌಡ, ರಮೇಶ, ಆಂಡಿ, ತಾಪಂ ಇಒ ಗಿರೀಶ್‌ ಇದ್ದರು.

ಹಲವೆಡೆ ಬೋರ್‌ವೆಲ್‌ಗೆ ಆಕ್ಷೇಪಣೆ: ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಸರ್ಕಾರದ ವತಿಯಿಂದ ಬೋರ್‌ವೆಲ್‌ ಕೊರೆಯಿಸಲಾಗಿದೆ. ಬಿ.ಆರ್‌.ಕಾವಲ್‌ 2ನೇ ಕಾಲೋನಿ, ಕಿಕ್ಕೇರಿಕಟ್ಟೆ, ವಡ್ಡರಹಳ್ಳಿ, ಕೊಮ್ಮೇಗೌಡನಕೊಪ್ಪಲು, ಗೆರಸನಹಳ್ಳಿ ಮತ್ತಿತರೆಡೆಗಳಲ್ಲಿ ಸಾರ್ವಜನಿಕರೇ ಪೈಪ್‌ಲೈನ್‌ ಹಾಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲು ತಮ್ಮ ಜಮೀನಿನ ಬೋರ್‌ವೆಲ್‌ಗ‌ಳಲ್ಲಿ ನೀರಿಗೆ ತೊಂದರೆ ಉಂಟಾಗಲಿದೆ ಎಂದು ತಡೆ ಒಡ್ಡುತ್ತಿದ್ದಾರೆಂದು

ಆಯಾ ಗ್ರಾಪಂ ಪಿಡಿಒಗಳು ಅಲವತ್ತುಕೊಂಡ‌ರು. ಈ ವೇಳೆ ಗ್ರಾಮಸ್ಥರನ್ನು ಮನವೊಲಿಸಿ, ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗಳ ಆದೇಶದಂತೆ ಕಾನೂನು ರೀತ್ಯ ಕ್ರಮವಹಿಸಿ ಎಂದು ಇಒ ಗಿರೀಶ್‌, ಪಿಡಿಒಗಳು ಹಾಗೂ ಇಂಜಿನಿಯರ್‌ಗಳಿಗೆ ಶಾಸಕರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next