Advertisement

56 ಚಿತ್ರ ವಿಮರ್ಶೆ: ಮಾಫಿಯಾ ಅಡ್ಡದಲ್ಲಿ ಸೇಡಿನ ಜ್ವಾಲೆ

04:38 PM Dec 10, 2022 | Team Udayavani |

ಜಗತ್ತಿನಲ್ಲಿ ಒಂದು ದೇಶ ಮತ್ತೂಂದು ದೇಶದ ಮೇಲೆ ರಾಜಕೀಯ, ಆರ್ಥಿಕ ಮತ್ತು ಮಾನವ ಸಂಪನ್ಮೂಲದ ಮೇಲೆ ಹಿಡಿತ ಸಾಧಿಸಲು ಜೈವಿಕ ಯುದ್ಧಗಳನ್ನು (ಬಯೋವಾರ್‌) ನಡೆಸುವುದನ್ನು ಅನೇಕರು ಕೇಳಿರುತ್ತೀರಿ. ಅದರಲ್ಲೂ ವಿವಿಧ ಸಾಂಕ್ರಾಮಿಕ ರೋಗಗಳನ್ನು ಹರಡುವುದು, ಕೊನೆಗೆ ಅದರ ನಿಯಂತ್ರಣಕ್ಕೆ ಲಸಿಕೆಗಳನ್ನು ಸಂಶೋಧಿಸುವುದು. ಲಸಿಕೆಗಳ ಪ್ರಾಯೋಗಿಕ ಪರೀಕ್ಷೆಗಳಿಗೆ ಅಂತರಾಷ್ಟ್ರೀಯ ಫಾರ್ಮಾಸಿ ಕಂಪೆನಿಗಳು ಹಿಂದುಳಿದ ದೇಶಗಳನ್ನು ಗುರಿಯಾಗಿಟ್ಟುಕೊಳ್ಳುವುದು. ಉಚಿತ ಚಿಕಿತ್ಸೆ ಹೆಸರಿನಲ್ಲಿ ಹೆಸರಿನಲ್ಲಿ ಅಲ್ಲಿನ ಮುಗ್ಧ ಜನರ ಮೇಲೆ ಲಸಿಕೆಗಳ ಪ್ರಯೋಗ ಮಾಡುವುದು. ಇದರ ಅಡ್ಡಪರಿಣಾಮದಿಂದ ನೂರಾರು ಜೀವಗಳು ಬಲಿಯಾಗುವುದು ಇಂಥ ಕೃತ್ಯಗಳು ಇಂದು ಗುಟ್ಟಾಗಿ ಉಳಿದಿಲ್ಲ. ಇಂಥದ್ದೇ ಮೆಡಿಕಲ್‌ ಮಾಫಿಯಾವನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ “56′

Advertisement

ವಿದೇಶಿ ಫಾರ್ಮಾಸಿ ಕಂಪೆನಿಯೊಂದು ತನ್ನ ಲಸಿಕೆಯ ಪ್ರಯೋಗಕ್ಕಾಗಿ ಹಳ್ಳಿಯ ಮುಗ್ಧ ಜನರನ್ನು ಬಳಕೆ ಮಾಡಿಕೊಂಡು ಅವರ ಸಾವಿಗೆ ಕಾರಣವಾಗುತ್ತದೆ. ಇಂಥ ಪ್ರಯೋಗದ ಅಡ್ಡ ಪರಿಣಾಮದಿಂದ ಬದುಕುಳಿದ ವ್ಯಕ್ತಿಯೊಬ್ಬ ಇದಕ್ಕೆ ಕಾರಣವಾದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಆ ಪ್ರತಿಕಾರ ಹೇಗಿರುತ್ತದೆ ಎಂಬುದೇ ಚಿತ್ರದ ಕಥೆಯ ಮೂಲ ಎಳೆ.

ಕಳೆದ ಐದಾರು ದಶಕಗಳಿಂದ ಜಗತ್ತಿನ ವಿವಿಧ ದೇಶಗಳಲ್ಲಿ ನಡೆದಿರುವ ಮೆಡಿಕಲ್‌ ಮಾಫಿಯಾ, ಮಾನವ ಪ್ರಯೋಗ (ಹ್ಯೂಮನ್‌ ಎಕ್ಸಪೆರಿಮೆಂಟ್‌)ಗಳ ಒಂದಷ್ಟು ವಿಷಯವನ್ನು ಇಟ್ಟುಕೊಂಡು ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ” 56′ ಸಿನಿಮಾವನ್ನು ತೆರೆಗೆ ತರಲಾಗಿದೆ.

ಮೊದಲರ್ಧ ಮಂದವಾಗಿ ಸಾಗುವ ಚಿತ್ರಕಥೆ, ದ್ವಿತೀಯರ್ಧದ ನಂತರ ಸಾಕಷ್ಟು ಟ್ವಿಸ್ಟ್‌, ಟರ್ನ್ಸ್ ತೆಗೆದುಕೊಂಡು ಕ್ಲೈಮ್ಯಾಕ್ಸ್‌ಗೆ ಬಂದು ನಿಲ್ಲುತ್ತದೆ. ಚಿತ್ರದ ಕಥಾವಸ್ತು ಚೆನ್ನಾಗಿದ್ದರೂ, ನಿರ್ದೇಶಕರು ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುವ ಸಾಧ್ಯತೆಗಳಿದ್ದವು.

ಇನ್ನು ಸಿಬಿಐನ ತನಿಖಾಧಿಕಾರಿಯಾಗಿ ಪ್ರಿಯಾಮಣಿ ತುಂಬಾ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೆಡಿಕಲ್‌ ಮಾಫಿಯಾದಿಂದ ಬಳಲಿದ ಯುವಕನಾಗಿ ಪ್ರವೀಣ್‌ ಅವರದ್ದು ಕೂಡ ಗಮನ ಸೆಳೆಯುವ ಅಭಿನಯ. ಉಳಿದಂತೆ ಹೆಚ್ಚಿನ ಪಾತ್ರಗಳು ಹಾಗೆ ಬಂದು ಹೀಗೆ ಹೋಗುವುದರಿಂದ ಅಷ್ಟಾಗಿ ನೋಡುಗರ ಮನಸ್ಸಿನಲ್ಲಿ ಉಳಿಯುವುದಿಲ್ಲ. ಸಿನಿಮಾದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಸಂಕಲನ ಕಾರ್ಯ ಇನ್ನಷ್ಟು ಹರಿತವಾಗಿದ್ದರೆ, ಕಲರಿಂಗ್‌, ವಿಎಫ್ಎಕ್ಸ್‌ನಂತಹ ತಾಂತ್ರಿಕ ಕಾರ್ಯಗಳಿಗೆ ಇನ್ನಷ್ಟು ಗಮನ ಕೊಡಬಹುದಿತ್ತು. ಕೆಲವೊಂದು ಲೋಪಗಳನ್ನು ಬದಿಗಿಟ್ಟು ನೋಡುವುದಾದರೆ, ” 56′ ಒಂದು ಒಳ್ಳೆಯ ಪ್ರಯತ್ನ ಎನ್ನಲು ಅಡ್ಡಿಯಿಲ್ಲ. ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಪ್ರಿಯರಿಗೆ “56′ ಇಷ್ಟವಾಗುವಂತಿಲ್ಲ.

Advertisement

ಜಿಎಸ್‌ಕೆ

Advertisement

Udayavani is now on Telegram. Click here to join our channel and stay updated with the latest news.

Next