ಅಹಮದಾಬಾದ್: ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಗುಜರಾತ್ ನ ರಾಜ್ ಕೋಟ್ ಜಿಲ್ಲೆಯ ಜಸ್ದಾನ್ ನಗರದ ಕೋಚಿಂಗ್ ಸೆಂಟರ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ದಾಳಿ ನಡೆಸಿದ ವೇಳೆ 550ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಿದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅನಾಥವಾಗಿ ಪತ್ತೆಯಾದ ನಾಗರಹಾವಿನ ಮೊಟ್ಟೆಗೆ ಕೃತಕ ಶಾಖ: ಹೊರಬಂದ ಮರಿಗಳು ಮತ್ತೆ ಕಾಡಿಗೆ
ಕೋಚಿಂಗ್ ಸೆಂಟರ್ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿದ್ದು, ಇದರ ಮಾಲೀಕನನ್ನು 39 ವರ್ಷದ ಜಯ್ ಸುಖ್ ಸಂಖಾಲ್ವಾ ಎಂದು ಗುರುತಿಸಲಾಗಿದೆ. ಸೋಮವಾರ ಜಯ್ ಸುಖ್ ನನ್ನು ಬಂಧಿಸಲಾಗಿದೆ ಎಂದು ರಾಜ್ ಕೋಟ್ ಪೊಲೀಸ್ ವರಿಷ್ಠಾಧಿಕಾರಿ ಬಲರಾಮ್ ಮೀನಾ ತಿಳಿಸಿದ್ದಾರೆ.
ಕೋವಿಡ್ 19 ಮಾರ್ಗಸೂಚಿ ಹಾಗೂ ಪೊಲೀಸ್ ಅಧಿಸೂಚನೆಯನ್ನು ಉಲ್ಲಂಘಿಸಿ ಸೋಂಕನ್ನು ಹರಡಲು ಕಾರಣಕರ್ತನಾಗಿರುವ ಜಯ್ ಸುಖ್ ನನ್ನು ಐಪಿಸಿ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಬಂಧಿಸಲಾಗಿದ್ದು, ವಿದ್ಯಾರ್ಥಿಗಳನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಮೀನಾ ವಿವರಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜವಾಹರ್ ನವೋದಯ ವಿದ್ಯಾಲಯ ಮತ್ತು ಬಾಲಚಾಡಿ ಸೈನಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಜಯ್ ಸುಖ್ ಪ್ರವೇಶ ಪರೀಕ್ಷೆಯ ಕೋಚಿಂಗ್ ನೀಡುತ್ತಿದ್ದು, ಈತ ಕೋಚಿಂಗ್ ಕಮ್ ಹಾಸ್ಟೆಲ್ ನಡೆಸುತ್ತಿದ್ದ ಎಂದು ತಿಳಿಸಿದ್ದಾರೆ.