Advertisement

54th IFFI Goa: ಆಸ್ಕರ್ ಗೆಂದೇ ಸಿನಿಮಾ ಮಾಡಬೇಡಿ…

12:11 PM Nov 25, 2023 | Team Udayavani |

ಪಣಜಿ, ನ. 24: ನಮ್ಮ ಚಲನಚಿತ್ರಗಳಿಗೆ ಆಸ್ಕರ್‌ ಪ್ರಶಸ್ತಿ ಪಡೆಯಲು ಏನು ಮಾಡಬೇಕು? ಎಂಬ ಪ್ರಶ್ನೆಯ ಜತೆಗೇ ಆಸ್ಕರ್‌ ಗಾಗಿಯೇ ಏಕೆ ಮಾಡಬೇಕು? ಇವೆರಡೂ ಪ್ರಶ್ನೆಗಳು ಹುಟ್ಟಿಕೊಂಡಿದ್ದು ನಿಜ. ಅವೆರಡಕ್ಕೂ ಉತ್ತರ ಸಿಕ್ಕಿದ್ದು ಇಫಿ ಚಲನಚಿತ್ರೋತ್ಸವದ ಸಂವಾದದಲ್ಲಿ.

Advertisement

ಸರಳವಾದ ಒಂದು ಸಾಲಿನ ಉತ್ತರ. ಒಳ್ಳೆ ಕಥೆಗಳಿರಬೇಕು. ಎರಡನೇ ಸಾಲಿನ ಉತ್ತರವೇನೆಂದರೆ ʼಭಾರತದಲ್ಲಿ ಅಂಥ ಬಹಳಷ್ಟು ಕಥೆಗಳಿವೆʼ. ಇದೇ ಸಂದರ್ಭದಲ್ಲಿ ಆಸ್ಕರ್‌ ಗೆಂದೇ ಸಿನಿಮಾ ಮಾಡುವುದರಲ್ಲಿ ಅರ್ಥವಿಲ್ಲ. ಅದಷ್ಟೇ ನಮ್ಮ ಗುರಿಯಾಗಬಾರದೂ ಸಹ. ಒಂದು ಸರ್ವಶ್ರೇಷ್ಠ ಸಿನಿಮಾ ಮಾಡುವುದು ನಮ್ಮ ಗುರಿಯಾಗಬೇಕು. ಉಳಿದೆಲ್ಲವೂ ಹಿಂಬಾಲಿಸುತ್ತದೆ ಎಂಬುದು ಒಟ್ಟೂ ಅಭಿಪ್ರಾಯವಾಗಿತ್ತು.

ಸ್ಲಂ ಡಾಗ್‌ ಮಿಲಿನೇರ್‌ ಚಿತ್ರದ ಸೌಂಡ್‌ ಡಿಸೈನರ್‌ ಮತ್ತು ಪ್ರೊಡಕ್ಷನ್‌ ಮಿಕ್ಸರ್‌ ರಸೂಲ್‌ ಕುಟ್ಟಿ ಅವರ ಪ್ರಕಾರ, ಆಸ್ಕರ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಯಾವುದೇ ಚಲನಚಿತ್ರಗಳು ಆಯಾ ದೇಶದಲ್ಲಿನ ವೈವಿಧ್ಯತೆಯನ್ನು ಬಿಂಬಿಸಬೇಕು. ಪ್ರಮುಖ ಸಿನಿಮಾ ನಿರ್ದೇಶಕ ಋತ್ವಿಕ್‌ ಘಟಕ್‌ ಅವರ ಮಾತನ್ನು ಉಲ್ಲೇಖಿಸುತ್ತಾ, ʼಹೆಚ್ಚು ಸ್ಥಳೀಯ(ರಾಷ್ಟ್ರೀಯ)ರಾದರೆ ಅಷ್ಟೇ ವಿಶ್ವ ಮಾನವರಾಗಲು ಸಾಧ್ಯ. ಹಾಗಾಗಿ ಹೆಚ್ಚು ಸ್ಥಳೀಯ, ರಾಷ್ಟ್ರೀಯ ನೆಲೆಯ ಒಂದು ಆಲೋಚನೆ ಜಾಗತಿಕ ಆಲೋಚನೆಯಾಗಿ ಬದಲಾಗಬಹುದು. ಇದನ್ನು ನಾವು ಗಮನಿಸಬೇಕುʼ ಎಂದರು.

ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಯೋಗವೂ ಪ್ರಶಸ್ತಿಯ ಬಳಿ ಕೊಂಡೊಯ್ಯಬಲ್ಲದು ಎಂದ ಅವರು, ಸರಕಾರಗಳೂ ಆಸ್ಕರ್‌ ಸ್ಪರ್ಧೆಗೆ ಇಳಿಯುವ ಚಲನಚಿತ್ರಗಳ ತಂಡವನ್ನು ಬೆಂಬಲಿಸಲು ಆರ್ಥಿಕ ಸಹಕಾರ ನೀಡಲು ಪ್ರತ್ಯೇಕ ನಿಧಿಯನ್ನು ಸ್ಥಾಪಿಸಬೇಕು ಎಂದವರು ರಸೂಲ್.

1982ರಲ್ಲಿ ಭಾನು ಆಥೈಯ ಈ ಗಾಜಿನ ಮನೆ ಒಡೆದು ಒಳಹೊಕ್ಕಿದ್ದರು. “ಗಾಂಧಿʼ ಚಿತ್ರದ ಕಾಸ್ಟ್ಯೂಮ್ಸ್‌  ಡಿಸೈನ್‌ ಗೆ ಆಸ್ಕರ್‌ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಬಳಿಕ ಎ.ಆರ್. ರೆಹಮಾನ, ರಸೂಲ್‌ ಕುಟ್ಟಿ, ಎಂ.ಎಂ. ಕೀರವಾಣಿ, ಗುಣೀತ್‌ ಮೊಂಗ ಕಪೂರ್‌ ಹಾಗೂ ಕಾರ್ತಿಕಿ ಗೊನ್ಸಾವಾಲೆಸ್‌ ಎಲ್ಲರೂ ಈ ಹಾದಿಯಲ್ಲಿ ಗುರಿಮುಟ್ಟಿದ್ದಾರೆ.

Advertisement

ಸಂವಾದವನ್ನು ಆರಂಭಿಸಿದ ʼದಿ ಎಲಿಫೆಂಟ್‌ ವಿಸ್ಪರರ್ಸ್‌ʼ ಚಿತ್ರದ ನಿರ್ಮಾಪಕರಾದ ಗುಣೀತ್‌ ಮೊಂಗ ಕಪೂರ್, ಅಮೆರಿಕದಲ್ಲಿ ಹಂಚಿಕೆಯಾಗಿ ಪ್ರದರ್ಶನವಾಗುವುದೂ ಆಸ್ಕರ್‌ ದಾರಿಯ ಆರಂಭವಾಗಬಹುದು. ಹಾಗಾಗಿ ಸಿನಿಮಾ ನಿರ್ಮಿಸಿದ ಮೇಲೆ ಇಡೀ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರಿಯಬೇಕು. ಬಳಿಕ ಹಂಚಿಕೆ, ಕಾರ್ಯತಂತ್ರ ಹಾಗೂ ಸರಿಯಾದ ಪಾಲುದಾರರನ್ನು ಹಿಡಿದರೆ ಗುರಿ ಮುಟ್ಟಲು ಸಾಧ್ಯವಿದೆʼ ಎಂದರು.

ಹಾಗೆಯೇ ಆಸ್ಕರ್‌ ಹಾದಿಯಲ್ಲಿ ಚಿತ್ರೋತ್ಸವಗಳ ಕೊಡುಗೆಯನ್ನು ಉಲ್ಲೇಖಿಸಲು ಮರೆಯಲಿಲ್ಲ. ʼಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರಗಳು ಸರಿಯಾಗಿ ಬಿಂಬಿತವಾದರೆ ಆಸ್ಕರ್‌ ಹಾದಿ ಕಠಿಣವೆನಿಸದು. ಆದ ಕಾರಣ ಸೂಕ್ತವಾದ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ನಮ್ಮ ಚಿತ್ರಗಳು ಪ್ರದರ್ಶನಗೊಳ್ಳಬೇಕುʼ ಎಂದರು.

ಶಾರ್ಟ್ಸ್‌ ಟಿವಿಯ ಕಾರ್ಟರ್‌ ಪಿಲ್ಚರ್‌ ಅವರ ಸಲಹೆಯಂತೆ, ಭಾರತದ ಕಥೆಗಳನ್ನು ಹೇಳಬೇಕು. ಇಲ್ಲಿ ಸಾಕಷ್ಟು ಕಥೆಗಳಿವೆ. ಅವುಗಳನ್ನು ಸರಿಯಾಗಿ ಬಿಂಬಿಸಬೇಕು. ಅದೇ ಆಸ್ಕರ್‌ ಗೆ ದಾರಿ ಎಂದರು. ಸೋನಲ್‌ ಕರ್ಲಾ ಸಂವಾದ ನಡೆಸಿಕೊಟ್ಟರು,.

Advertisement

Udayavani is now on Telegram. Click here to join our channel and stay updated with the latest news.

Next