Advertisement

500 ಕೋಟಿ ಲಸಿಕೆ ವಾಗ್ಧಾನ; ವಿಶ್ವ ಸಮುದಾಯಕ್ಕೆ ಪ್ರಧಾನಿ ಮೋದಿ ಘೋಷಣೆ

12:41 AM Nov 01, 2021 | Team Udayavani |

ಹೊಸದಿಲ್ಲಿ: “ಜಗತ್ತಿನ ಆವಶ್ಯಕತೆಗಳನ್ನು ತನ್ನ ಶಕ್ತ್ಯಾನುಸಾರ ಪೂರೈಸಲು ಭಾರತ ಎಂದಿಗೂ ಬದ್ಧ ವಾಗಿದೆ. ಜಗತ್ತಿನ ನಾನಾ ರಾಷ್ಟ್ರಗಳು ಎದುರಿಸು ತ್ತಿರುವ ಕೋವಿಡ್‌ ಲಸಿಕೆಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಮುಂದಿನ ವರ್ಷ 500 ಕೋಟಿ ಡೋಸ್‌ ಲಸಿಕೆಗಳನ್ನು ಉಚಿತವಾಗಿ ಹಂಚಲು ಭಾರತ ಸಿದ್ಧವಿದೆ. ಹಾಗಾಗಿ ಭಾರತದಲ್ಲಿ ಉತ್ಪಾದನೆ ಯಾಗುವ ಲಸಿಕೆಗಳಿಗೆ ವಿಶ್ವಸಂಸ್ಥೆಯಿಂದ ಬೇಗನೇ ಮಾನ್ಯತೆ ಸಿಕ್ಕರೆ ಅನುಕೂಲವಾಗುತ್ತದೆ’ ಎಂದು ಪ್ರಧಾನಿ ಮೋದಿ ಆಗ್ರಹಿಸಿದ್ದಾರೆ.

Advertisement

ಇಟಲಿಯ ರೋಮ್‌ನಲ್ಲಿ ರವಿವಾರ ಮುಕ್ತಾಯಗೊಂಡ ಜಿ-20 ಶೃಂಗದ ಅಂತಿಮ ದಿನ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, “ಈಗ ಆವರಿಸಿರುವ ಕೋವಿಡ್‌ ಬಿಕ್ಕಟ್ಟು ನಿವಾರಣೆಯಾಗಲು ವರ್ಷಗಳೇ ಹಿಡಿಯುತ್ತವೆ. ಇದನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಲು ಎಲ್ಲ ರಾಷ್ಟ್ರಗಳ ಸಹಕಾರ ಬೇಕು. ಅದಕ್ಕಾಗಿ, “ಒಂದು ವಿಶ್ವ- ಒಂದು ಆರೋಗ್ಯ’ ಎಂಬ ಧ್ಯೇಯ ದಿಂದ ಎಲ್ಲರೂ ಒಮ್ಮತದ, ದೃಢನಿರ್ಧಾರದಿಂದ ಮುಂದುವರಿಯಬೇಕು. ಎಲ್ಲ ದೇಶಗಳು ಒಗ್ಗಟ್ಟಾಗಿದ್ದರೆ, ಭವಿಷ್ಯದಲ್ಲಿ ಸಂಭವಿಸುವ ಯಾವುದೇ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲೆವು’ ಎಂದು ಹೇಳಿದ್ದಾರೆ.

“ಕೋವಿಡ್‌ ಸಂದರ್ಭದಲ್ಲಿ ವಿಶ್ವ ಔಷಧ ರಂಗದಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತ, ಜಗತ್ತಿನ 150 ರಾಷ್ಟ್ರಗಳಿಗೆ ಉಚಿತ ಔಷಧ ರವಾನಿಸಿದೆ’ ಎಂದು ಅವರು ತಿಳಿಸಿದ್ದಾರೆ.

ಸಮಯೋಚಿತ ಆಗ್ರಹ: ಇದೇ ತಿಂಗಳ 3ರಂದು ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರ ಸಭೆ ಜಿನಿವಾದಲ್ಲಿ ನಡೆಯಲಿದ್ದು, ಭಾರತ್‌ ಬಯೋಟೆಕ್‌ನ “ಕೊವ್ಯಾಕಿನ್‌’ ಹಾಗೂ ಇನ್ನಿತರ ಲಸಿಕೆಗಳ ತುರ್ತು ಬಳಕೆಗೆ ಒಪ್ಪಿಗೆ ನೀಡುವ ಬಗ್ಗೆ ಚರ್ಚೆ ನಡೆಸಲಿವೆ. ಆ ಹಿನ್ನೆಲೆಯಲ್ಲಿ, ಪ್ರಧಾನಿ ಜಿ-20ರ ವೇದಿಕೆಯಲ್ಲೇ ಭಾರತದ ಲಸಿಕೆಗೆ ವಿಶ್ವಸಂಸ್ಥೆಯ ಒಪ್ಪಿಗೆ ಸಿಗಬೇಕೆಂದು ಆಗ್ರಹಿಸಿರುವುದು ಸಮಯೋಚಿತವಾಗಿದೆ.ಇದೇ ವೇಳೆ, ಜಿ-20ಯ ಸದಸ್ಯ ರಾಷ್ಟ್ರಗಳಲ್ಲಿ ವಿತರಿಸಲಾಗುವ ಲಸಿಕಾ ಪ್ರಮಾಣ ಪತ್ರಗಳನ್ನು ಪರಸ್ಪರ ಗೌರವಿಸಿ, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದು ಮೋದಿ ಮನವಿ ಮಾಡಿದ್ದಾರೆ.

ತೆರಿಗೆ ನಿರ್ಧಾರಕ್ಕೆ ಸ್ವಾಗತ: ಇದೇ ಸಮ್ಮೇಳನದಲ್ಲಿ, ಕೊರೋನೋತ್ತರ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗುವ ನಿಟ್ಟಿನಲ್ಲಿ ಜಿ-20 ಸದಸ್ಯ ರಾಷ್ಟ್ರಗಳು ತಮ್ಮಲ್ಲಿನ ಬಹುರಾಷ್ಟ್ರೀಯ ಕಂಪೆನಿಗಳ ಮೇಲೆ ವಿಧಿಸಲಾಗುವ ತೆರಿಗೆಯನ್ನು ಶೇ. 15ಕ್ಕೆ ಸೀಮಿತ ಗೊಳಿಸಲು ಒಕ್ಕೊರಲಿನ ನಿರ್ಧಾರ ಕೈಗೊಂಡಿ ರುವುದನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. “ಇದೊಂದು ಸುಂದರ ನಿರ್ಧಾರವಾಗಿದ್ದು, ಜಾಗತಿಕ ಆರ್ಥಿಕ ಸೌಧದ ನಿರ್ಮಾಣಕ್ಕೆ ನಾಂದಿ ಹಾಡಲಿದೆ’ ಎಂದು ಬಣ್ಣಿಸಿದರು.

Advertisement

ಇದನ್ನೂ ಓದಿ:ನ. 5ಕ್ಕೆ ಪ್ರಧಾನಿ ಉತ್ತರಾಖಂಡ ಭೇಟಿ : ಕಾರ್ಯಕ್ರಮ ರಂಗು ಹೆಚ್ಚಿಸಲಿರುವ ಸಾಧು-ಸಂತರು

ಟ್ರೇವಿ ಕಾರಂಜಿಗೆ ಮೋದಿ ಭೇಟಿ: ರೋಮ್‌ನ ಟ್ರೇವಿ ಬೃಹತ್‌ ಕಾರಂಜಿಗೆ ಪ್ರಧಾನಿ ಮೋದಿ ಸೇರಿ ವಿಶ್ವನಾಯಕರು ರವಿವಾರ ಭೇಟಿ ನೀಡಿದರು. ಈ ಕಾರಂಜಿಯಲ್ಲಿ ನೀರು 26.3 ಮೀಟರ್‌ ಎತ್ತರಕ್ಕೆ ಚಿಮ್ಮುತ್ತದೆ. ಇಡೀ ಕಾರಂಜಿಯು 49.15 ಮೀ. ವ್ಯಾಪ್ತಿಯಲ್ಲಿದೆ.

ಪಾಕ್‌ ವಾಯುಗಡಿ ಮೂಲಕ ಮೋದಿ ಪ್ರಯಾಣ: ಜಿ-20 ಶೃಂಗದಲ್ಲಿ ಪಾಲ್ಗೊಳ್ಳಲು ಇಟಲಿಗೆ ತೆರಳುವಾಗ ಮೋದಿಯವರ ವಿಮಾನ, ಪಾಕಿಸ್ಥಾನದ ವಾಯುಗಡಿಯ ಮೂಲಕ ಹಾದು ಹೋಗಿದೆ. ಇಟಲಿಯಿಂದ ಸ್ಕಾಟ್ಲೆಂಡ್‌ನ‌ ಗ್ಲಾಸ್ಗೋ ಗೆ ತೆರಳುವಾಗಲೂ ಪಾಕ್‌ ವಾಯುಗಡಿಯನ್ನೇ ಬಳಸಲಾಗುತ್ತದೆ. ಇವೆರಡೂ ಪ್ರಯಾಣಗಳಿಗೆ ತನ್ನ ವಾಯುಗಡಿ ಬಳಸಲು ಪಾಕಿಸ್ಥಾನ ಸರಕಾರ ಅನುಮತಿ ನೀಡಿದೆ.

ಕಲ್ಲಿದ್ದಲಿಗೆ ಗುಡ್‌ಬೈ!: ಪರಿಸರ ಮಾಲಿನ್ಯ ತಡೆಗಟ್ಟಲು ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನೆಯನ್ನು ಈ ಶತಮಾನದ ಮಧ್ಯಭಾಗದ ಹೊತ್ತಿಗೆ ಸಂಪೂರ್ಣವಾಗಿ ನಿಲ್ಲಿಸುವ ಒತ್ತಾಯಪೂರ್ವಕ ನಿರ್ಧಾರವೊಂದನ್ನು ಜಿ-20 ಸದಸ್ಯ ರಾಷ್ಟ್ರಗಳು ಕೈಗೊಂಡಿವೆ.

ಗ್ಲಾಸ್ಗೋ ನಲ್ಲಿ ವಿಶ್ವ ಪರಿಸರ ಸಮ್ಮೇಳನಕ್ಕೆ ಚಾಲನೆ
ವಿಶ್ವಸಂಸ್ಥೆಯಿಂದ ಆಯೋಜನೆಗೊಂಡಿರುವ ಜಾಗತಿಕ ಪರಿಸರ ಸಮ್ಮೇಳನಕ್ಕೆ,ಸ್ಕಾಟ್ಲೆಂಡ್‌ನ‌ ಗ್ಲಾಸ್ಗೋ ನಲ್ಲಿ ರವಿವಾರ ಚಾಲನೆ ನೀಡಲಾಗಿದೆ. ಜಿ-20 ಸದಸ್ಯ ರಾಷ್ಟ್ರಗಳು ಸೇರಿ ವಿಶ್ವದ ದೈತ್ಯ ರಾಷ್ಟ್ರಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿವೆ. ಇಲ್ಲಿ ಭಾಷಣ ಮಾಡಲಿರುವ ಪ್ರಧಾನಿ ಮೋದಿ, ಅಭಿವೃದ್ಧಿಗೊಂಡ ರಾಷ್ಟ್ರಗಳ ಪರಿಸರ ಮಾಲಿನ್ಯದಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ, ಆ ನಷ್ಟವನ್ನು ಅಭಿವೃದ್ಧಿಗೊಂಡ ರಾಷ್ಟ್ರಗಳು ನಗದು ಪರಿಹಾರ ರೂಪದಲ್ಲಿ ಕಟ್ಟಿಕೊಡುವಂತೆ ಜಾಗತಿಕ ಸಮುದಾಯವನ್ನು ಆಗ್ರಹಿಸುವ ಸಾಧ್ಯತೆಯಿದೆ.

ಭಾಷಣದ ಹೈಲೈಟ್ಸ್‌…
-ಭಾರತದ ಲಸಿಕೆಗಳಿಗೆ ಮಾನ್ಯತೆ ನೀಡಬೇಕೆಂದು ವಿಶ್ವಸಂಸ್ಥೆಗೆ ಆಗ್ರಹ
-ನ.3ರ ವಿಶ್ವ ಆರೋಗ್ಯ ಸಂಸ್ಥೆ ಸಭೆಯಲ್ಲಿ ಕೊವ್ಯಾಕ್ಸಿನ್‌ಗೆ ಒಪ್ಪಿಗೆ ನೀಡುವ ಬಗ್ಗೆ ಚರ್ಚೆ
-ಕಾರ್ಪೋರೆಟ್‌ ತೆರಿಗೆ ಇಳಿಕೆ ನಿರ್ಧಾರ ಸ್ವಾಗತಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ
-150 ದೇಶಗಳಿಗೆ ಉಚಿತವಾಗಿ ಕೋವಿಡ್‌ ಸಂಬಂಧಿತ ಔಷಧ ರವಾನಿಸಿದ್ದನ್ನು ಸ್ಮರಣೆ
-ಜಿ-20 ಸದಸ್ಯ ರಾಷ್ಟ್ರಗಳಲ್ಲಿ ವಿತರಣೆಯಾಗುವ ಲಸಿಕೆ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡುವಂತೆ ಆಗ್ರಹ

Advertisement

Udayavani is now on Telegram. Click here to join our channel and stay updated with the latest news.

Next