ತಿ.ನರಸೀಪುರ: ನೆರೆ ಪರಿಹಾರ ಹಂಚಿಕೆಯಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ದೂರಿದರು. ಪಟ್ಟಣದ ಹಳೇ ತಿರುಮಕೂಡಲು ಸೇರಿದಂತೆ ವಿಶ್ವಕರ್ಮ ಬೀದಿ ಹಾಗೂ ಹೆಮ್ಮಿಗೆ ರಸ್ತೆಯಲ್ಲಿ ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 14 ಜಿಲ್ಲೆಗಳಿಗೆ ಮಂಜೂರು ಮಾಡಿರುವ 100 ಕೋಟಿ ರೂ.ಬರ ಪರಿಹಾರ ಹಂಚಿಕೆಯ ಆದೇಶದ ಪಟ್ಟಿಯಲ್ಲಿ ಎರಡೂ ಜಿಲ್ಲೆಗಳ ಹೆಸರಿಲ್ಲ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬರ ನಿರ್ವಹಣೆಗೆ ಮುಖ್ಯ ಕಾರ್ಯದರ್ಶಿ ಗ್ರೇಡ್ ಅಧಿಕಾರಿಗಳನ್ನು ನಿಯೋಜಿಸಿದ್ದರೆ, ಈ ಭಾಗದ ಜಿಲ್ಲೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಉಸ್ತುವಾರಿ ನೀಡಲಾಗಿದೆ ಎಂದರು.
ಹುಣಸೂರು, ಎಚ್.ಡಿ.ಕೋಟೆ, ನಂಜನಗೂಡು ಹಾಗೂ ತಿ.ನರಸೀಪುರ ಮತ್ತು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು ನೆರೆ ಹಾವಳಿಗೆ ಸಿಲುಕಿವೆ. ಎಚ್.ಡಿ.ಕೋಟೆಯಲ್ಲಿ ಬೆಳೆಗಳು ಮುಳುಗಿ ಹೋಗಿವೆ. ನಂಜನಗೂಡು ತಾಲೂಕಿನಲ್ಲಿ 1154 ಮನೆಗಳು ಕುಸಿದಿವೆ. ಕೊಳ್ಳೇಗಾಲ ತಾಲೂಕಿನಲ್ಲಿ 4 ಗ್ರಾಮಗಳು ಮುಳುಗಡೆಯಾಗಿವೆ. ಹೀಗಾಗಿ ಎರಡೂ ಜಿಲ್ಲೆಗಳಿಗೆ ಕನಿಷ್ಠ 500 ಕೋಟಿ ರೂ. ಪರಿಹಾರ ಘೋಷಿಸಿಬೇಕು ಎಂದರು.
ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ ಮಾತನಾಡಿ, ಎರಡು ಜಿಲ್ಲೆಯ ಐದು ತಾಲೂಕುಗಳಲ್ಲಿನ ನೆರೆ ಹಾನಿಯನ್ನು ಖುದ್ದಾಗಿ ಪರಿಶೀಲಿಸಿ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತೇವೆ ಎಂದರು. ಈ ವೇಳೆ ಜಿಪಂ ಸದಸ್ಯ ಮಂಜುನಾಥನ್, ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ, ಜಿಪಂ ಮಾಜಿ ಸದಸ್ಯ ಎಂ.ಆರ್.ಸೋಮಣ್ಣ, ಎಪಿಎಂಸಿ ಮಾಜಿ ಸದಸ್ಯ ಉಕ್ಕಲಗೆರೆ ಬಸವಣ್ಣ, ಪುರಸಭಾ ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ,
ಎನ್.ಸೋಮು, ಆರ್.ನಾಗರಾಜು, ಎಸ್.ಮದನ್ ರಾಜ್, ಬಾದಾಮಿ ಮಂಜು, ತಾಪಂ ಸದಸ್ಯರಾದ ಎಂ.ರಮೇಶ, ಕೆಬ್ಬೆ ನಾಗರಾಜು, ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಎಂ.ಲಿಂಗರಾಜು, ಪಿಎಸಿಸಿಎಸ್ ನಿರ್ದೇಶಕ ಟಿ.ಎನ್.ಫಣೀಶ್‌ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಮಾಜಿ ಸದಸ್ಯ ಆಲಗೂಡು ನಾಗರಾಜು ಇತರರಿದ್ದರು.