Advertisement

ಏಕದಿನ ಕ್ರಿಕೆಟ್ ಗೆ 50 ವರ್ಷ: ಇಲ್ಲಿದೆ ಏಕದಿನ ಕ್ರಿಕೆಟ್ ನ 50 ಸ್ವಾರಸ್ಯಗಳು!

04:08 PM Jan 05, 2021 | Team Udayavani |

ಕ್ರಿಕೆಟಿನ ವ್ಯಾಕರಣ, ಸ್ವರೂಪವನ್ನು ಬದಲಿಸಿದ ಏಕದಿನ ಕ್ರಿಕೆಟ್‌ ಪರಂಪರೆಗೆ ಈಗ ಸುವರ್ಣ ಸಂಭ್ರಮ. ಅರ್ಧ ಶತಮಾನದ ಕಾಲಘಟ್ಟದ ಯಶಸ್ವಿ ಪಯಣದಲ್ಲಿ ಬರೀ ರೋಮಾಂಚನ! ಟಿ20 ಇರಲಿ, ಟಿ10 ಬಂದರೂ ಏಕದಿನ ಜೈತ್ರಯಾತ್ರೆಗೆ ಯಾವುದೇ ಅಡ್ಡಿಬಾರದೆಂಬುದು ಕ್ರಿಕೆಟ್‌ ಪ್ರಿಯರ ಲೆಕ್ಕಾಚಾರ. 50 ವರ್ಷಗಳ ಏಕದಿನ ಕ್ರಿಕೆಟ್ ನ 50 ಸ್ವಾರಸ್ಯಗಳು ಇಲ್ಲಿದೆ.

  1. ಬದಲಿ ಫೀಲ್ಡರ್‌ ಆಗಿ ಬಂದು ಅತೀ ಹೆಚ್ಚು 4 ಕ್ಯಾಚ್‌ ಪಡೆದ ದಾಖಲೆ ನ್ಯೂಜಿಲ್ಯಾಂಡಿನ ಜಾನ್‌ ಬ್ರೇಸ್‌ವೆಲ್‌ ಹೆಸರಲ್ಲಿದೆ.
  2. ಈ ವರೆಗೆ 14 ಮಂದಿ ಕ್ರಿಕೆಟಿಗರು ಎರಡು ದೇಶಗಳನ್ನು ಪ್ರತಿನಿಧಿಸಿದ್ದಾರೆ. ಆದರೆ ಇದರಲ್ಲಿ ಭಾರತದ ಆಟಗಾರರ್ಯಾರೂ ಸೇರಿಲ್ಲ.
  3. ನಾರ್ಮನ್‌ ಗಿಫ‌ರ್ಡ್‌ ಅತೀ ಹಿರಿಯ ನಾಯಕ. 1985ರಲ್ಲಿ ಇಂಗ್ಲೆಂಡ್‌ ತಂಡದ ನಾಯಕರಾಗಿದ್ದಾಗ ಅವರ ವಯಸ್ಸು 44 ವರ್ಷ, 359 ದಿನ.
  4. ಅಫ್ಘಾನಿಸ್ಥಾನದ ರಶೀದ್‌ ಖಾನ್‌ ಅತೀ ಕಿರಿಯ ಕಪ್ತಾನ. 2018ರಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ತಂಡದ ಚುಕ್ಕಾಣಿ ಹಿಡಿಯುವಾಗ ಅವರ ವಯಸ್ಸು 19 ವರ್ಷ, 165 ದಿನ.
  5. ಏಕದಿನದಲ್ಲಿ 1983ರ ತನಕ 60 ಓವರ್‌ ಬಳಕೆಯಲ್ಲಿತ್ತು. ಇನ್ನಿಂಗ್ಸ್‌ ಅವಧಿ 4 ಗಂಟೆಯಾಗಿತ್ತು. ಆದರೆ ಏಕದಿನ ಇತಿಹಾಸದ ಮೊದಲ ಪಂದ್ಯ ತಲಾ 40 ಓವರ್‌ಗಳದ್ದಾಗಿತ್ತು.
  6. ಭಾರತ ತನ್ನ ಮೊದಲ ಏಕದಿನ ಪಂದ್ಯವನ್ನು 1974ರ ಜು. 13ರಂದು ಇಂಗ್ಲೆಂಡ್‌ ವಿರುದ್ಧ ಲೀಡ್ಸ್‌ನಲ್ಲಿ ಆಡಿತು. ಇದು ಏಕದಿನ ಚರಿತ್ರೆಯ 12ನೇ ಮುಖಾಮುಖೀಯಾಗಿತ್ತು.
  7. ಇಂಗ್ಲೆಂಡಿನ ಜಾನ್‌ ಎಡ್ರಿಚ್‌ ಏಕದಿನದಲ್ಲಿ ಮೊದಲ ಬೌಂಡರಿ ಹಾಗೂ ಮೊದಲ ಅರ್ಧ ಶತಕ ದಾಖಲಿಸಿದ ಆಟಗಾರ. ಮೊದಲ ಸಿಕ್ಸರ್‌ ಸಿಡಿಸಿದವರು ಇಯಾನ್‌ ಚಾಪೆಲ್‌.
  8. ಆಸ್ಟ್ರೇಲಿಯದ ಗ್ರಹಾಂ ಮೆಕೆಂಝಿ ಏಕದಿನದ ಮೊದಲ ಎಸೆತವಿಕ್ಕಿದ ಬೌಲರ್‌. ಇದನ್ನು ಎದುರಿಸಿದವರು ಜೆಫ್ ಬಾಯ್ಕಟ್‌.
  9. ಆಸ್ಟ್ರೇಲಿಯದ ಅಲನ್‌ ಥಾಮ್ಸನ್‌ ಮೊದಲ ವಿಕೆಟ್‌ ಕಿತ್ತ ಸಾಧಕ. ಔಟ್‌ ಆದವರು ಜೆಫ್ ಬಾಯ್ಕಟ್‌. ಆಸೀಸ್‌ ನಾಯಕ ಬಿಲ್‌ ಲಾರಿ ಇವರ ಕ್ಯಾಚ್‌ ಪಡೆದಿದ್ದರು.
  10. ಇಂಗ್ಲೆಂಡಿನ ಬಾಸಿಲ್‌ ಡಿ’ಒಲಿವೆರಾ ರನೌಟ್‌ ಆಗಿ ವಿಕೆಟ್‌ ಒಪ್ಪಿಸಿದ ಮೊದಲ ಕ್ರಿಕೆಟಿಗ.
  11. ಲೂ ರೋವ್ಟನ್‌ ಮತ್ತು ಟಾಮ್‌ ಬ್ರೂಕ್ಸ್‌ ಮೊದಲ ಏಕದಿನದಲ್ಲಿ ಕರ್ತವ್ಯ ನಿಭಾಯಿಸಿದ ಅಂಪಾಯರ್‌ಗಳು.
  12. ಆಸ್ಟ್ರೇಲಿಯದ ಜಿ.ಎಂ. ಗ್ಲೀಸನ್‌ ಏಕದಿನದ ಮೊದಲ 12ನೇ ಆಟಗಾರ. ಇತಿಹಾಸದ ಮೊದಲ ಪಂದ್ಯದಲ್ಲೇ ಇವರನ್ನು ಈ ಸ್ಥಾನಕ್ಕೆ ನೇಮಿಸಲಾಗಿತ್ತು. ಆದರೆ ಇಂಗ್ಲೆಂಡ್‌ 12ನೇ ಕ್ರಿಕೆಟಿಗನನ್ನು ಸೇರಿಸಿಕೊಂಡಿರಲಿಲ್ಲ.
  13. ವಿವಿಯನ್‌ ರಿಚರ್ಡ್ಸ್‌ ವಿಶ್ವಕಪ್‌ ಕ್ರಿಕೆಟ್‌ ಮತ್ತು ವಿಶ್ವಕಪ್‌ ಫ‌ುಟ್‌ಬಾಲ್‌ ಆಡಿದ ಏಕೈಕ ಆಟಗಾರ. ಅವರು 1974ರಲ್ಲಿ ಆ್ಯಂಟಿಗುವಾ ಪರ ವಿಶ್ವಕಪ್‌ ಫ‌ುಟ್‌ಬಾಲ್‌ ಅರ್ಹತಾ ಸುತ್ತಿನಲ್ಲಿ ಆಡಿದ್ದರು.
  14. ಕುಮಾರ ಸಂಗಕ್ಕರ ಸತತ 4 ಪಂದ್ಯಗಳಲ್ಲಿ ಸೆಂಚುರಿ ಬಾರಿಸಿದ ವಿಶ್ವದ ಏಕೈಕ ಕ್ರಿಕೆಟಿಗ.
  15. ಸಚಿನ್‌ ತೆಂಡುಲ್ಕರ್‌ ಅತೀ ಹೆಚ್ಚು 18 ಸಲ ನರ್ವಸ್‌ ನೈಂಟಿಗೆ ವಿಕೆಟ್‌ ಒಪ್ಪಿಸಿದ ಕ್ರಿಕೆಟಿಗ.
  16. ಏಕದಿನದಲ್ಲಿ 30 ಓವರ್‌ಗಳ ಬಳಿಕ ಕ್ರೀಸ್‌ ಇಳಿದು 2 ಸೆಂಚುರಿ ಬಾರಿಸಿದ ಏಕೈಕ ಆಟಗಾರನೆಂದರೆ ಎಬಿ ಡಿ ವಿಲಿಯರ್. ಒಮ್ಮೆ ಭಾರತದ ವಿರುದ್ಧ 33ನೇ ಓವರ್‌ನಲ್ಲಿ, ಮತ್ತೂಮ್ಮೆ ವಿಂಡೀಸ್‌ ವಿರುದ್ಧ 39ನೇ ಓವರ್‌ನಲ್ಲಿ ಬ್ಯಾಟಿಂಗಿಗೆ ಬಂದು ಶತಕ ಸಿಡಿಸಿದ್ದರು.
  17. ಸಚಿನ್‌ ತೆಂಡುಲ್ಕರ್‌ ಏಕದಿನದಲ್ಲಿ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗ.
  18. ಆಸ್ಟ್ರೇಲಿಯ ಈ ವರೆಗೆ 3 ಸಲ 359 ರನ್‌ ಬಾರಿಸಿದೆ. ಮೂರೂ ಸಲ ಭಾರತದ ವಿರುದ್ಧವೇ ಈ ಸ್ಕೋರ್‌ ದಾಖಲಿಸಿದ್ದು ವಿಶೇಷ.
  19. ಅತೀ ವೇಗದ ಶತಕದ ದಾಖಲೆ (31 ಎಸೆತ) ಮತ್ತು ಅರ್ಧ ಶತಕದ ದಾಖಲೆ (16 ಎಸೆತ) ಎಬಿ ಡಿ ವಿಲಿಯರ್ ಹೆಸರಲ್ಲಿದೆ.
  20. ಒಂದೂ ವಿಕೆಟ್‌ ಉರುಳಿಸದೆ, ಕ್ಯಾಚ್‌ ಪಡೆಯದೆ, ಸಿಂಗಲ್‌ ರನ್‌ ಕೂಡ ಮಾಡದೆ ಕೇವಲ ಬೌಲಿಂಗ್‌ ಫಿಗರ್‌ಗೋಸ್ಕರ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಏಕೈಕ ಕ್ರಿಕೆಟಿಗ ವೆಸ್ಟ್‌ ಇಂಡೀಸಿನ ಕ್ಯಾಮರಾನ್‌ ಕಫಿ. 2001 ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಇವರ ಬೌಲಿಂಗ್‌ ಫಿಗರ್‌ ಹೀಗಿತ್ತು: 10-2-20-0.
  21. ರಿಕಿ ಪಾಂಟಿಂಗ್‌ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್‌ ಅತ್ಯಧಿಕ 3 ವಿಶ್ವಕಪ್‌ ವಿಜೇತ ತಂಡದ ಸದಸ್ಯರೆನಿಸಿದ ಇಬ್ಬರು ಕ್ರಿಕೆಟಿಗರು.
  22. ನಾಯಕನಾಗಿ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್‌ ಬಾರಿಸಿದ ದಾಖಲೆ ವೀರೇಂದ್ರ ಸೆಹವಾಗ್‌ ಹೆಸರಲ್ಲಿದೆ (219).
  23. ಅತೀ ವೇಗದ ದ್ವಿಶತಕದ ದಾಖಲೆ ಕ್ರಿಸ್‌ ಗೇಲ್‌ ಹೆಸರಲ್ಲಿದೆ (138 ಎಸೆತ).
  24. ಕ್ಯಾಲೆಂಡರ್‌ ವರ್ಷವೊಂದರಲ್ಲಿ ಅತ್ಯಧಿಕ 1,894 ರನ್‌ ಬಾರಿಸಿದ ಸಾಧಕ ಸಚಿನ್‌ ತೆಂಡುಲ್ಕರ್‌.
  25. ಆಸ್ಟ್ರೇಲಿಯ ಅತೀ ಹೆಚ್ಚು ಸತತ 21 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದೆ.
  26. ವಿಂಡೀಸಿನ ಗೇಲ್‌-ಸಾಮ್ಯಯೆಲ್ಸ್‌ ಅತೀ ಹೆಚ್ಚು 372 ರನ್ನುಗಳ ದಾಖಲೆ ಜತೆಯಾಟ ನಡೆಸಿದ ಜೋಡಿಯಾಗಿದೆ.
  27. ದಕ್ಷಿಣ ಆಫ್ರಿಕಾದ ಹರ್ಶಲ್‌ ಗಿಬ್ಸ್ ಓವರಿನ ಆರೂ ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿದ ಏಕೈಕ ಕ್ರಿಕೆಟಿಗ.
  28. ಬಾಂಗ್ಲಾದೇಶ ಅತೀ ಹೆಚ್ಚು ಸತತ 30 ಏಕದಿನ ಪಂದ್ಯಗಳಲ್ಲಿ ಸೋಲನುಭವಿಸಿದ ತಂಡ.
  29. ಪಾಕಿಸ್ಥಾನದ ಜಲಾಲುದ್ದೀನ್‌ ಏಕದಿನದ ಮೊದಲ ಹ್ಯಾಟ್ರಿಕ್‌ ಸಂಪಾದಿಸಿದ ಬೌಲರ್‌. ಅದು ಆಸ್ಟ್ರೇಲಿಯ ವಿರುದ್ಧದ 1982ರ ಹೈದರಾಬಾದ್‌ ಪಂದ್ಯವಾಗಿತ್ತು.
  30. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ ಕೆಪ್ಲರ್‌ ವೆಸಲ್ಸ್‌ ಒಂದೂ ಸೊನ್ನೆ ದಾಖಲಿಸದೆ ಸತತ 100 ಇನ್ನಿಂಗ್ಸ್‌ ಆಡಿದ ಏಕೈಕ ಆಟಗಾರ.
  31. ಶೇನ್‌ ವಾರ್ನ್ ಗಿಂತ ಸನತ್‌ ಜಯಸೂರ್ಯ ಹೆಚ್ಚು ವಿಕೆಟ್‌ ಹಾರಿಸಿದ್ದಾರೆ. ವಾರ್ನ್ 293 ವಿಕೆಟ್‌ ಕಿತ್ತರೆ, ಜಯಸೂರ್ಯ 323 ವಿಕೆಟ್‌ ಸಾಧನೆಗೈದಿದ್ದಾರೆ.
  32. ಅತೀ ವೇಗದ ಬೌಲಿಂಗ್‌ ಎಸೆತದ ದಾಖಲೆ ಶೋಯಿಬ್‌ ಅಖ್ತರ್‌ ಹೆಸರಲ್ಲಿದೆ. 2003ರ ಇಂಗ್ಲೆಂಡ್‌ ಎದುರಿನ ವಿಶ್ವಕಪ್‌ ಪಂದ್ಯದಲ್ಲಿ 161.3 ಕಿ.ಮೀ. ವೇಗದ ಎಸೆತವಿಕ್ಕಿದ್ದರು.
  33. 1992ರ ವಿಶ್ವಕಪ್‌ ಮೂಲಕ ಆಸ್ಟ್ರೇಲಿಯ ಮೊದಲ ಸಲ ಹಗಲು-ರಾತ್ರಿ ಪಂದ್ಯ, ಬಣ್ಣದ ಜೆರ್ಸಿಯ ಪ್ರಯೋಗ ಮಾಡಿತು.
  34. ಅತೀ ಹೆಚ್ಚು ಎಸೆತಗಳನ್ನೆದುರಿಸಿ ಅತೀ ಕಡಿಮೆ ರನ್‌ ಮಾಡಿದ ವಿಚಿತ್ರ ದಾಖಲೆ ಸುನೀಲ್‌ ಗಾವಸ್ಕರ್‌ (174 ಎಸೆತ, ಅಜೇಯ 36 ರನ್‌).
  35. ಕಪಿಲ್‌ದೇವ್‌ ಭಾರತದ ಮೊದಲ ಶತಕವೀರ. 1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಅವರು ಅಜೇಯ 175 ರನ್‌ ಬಾರಿಸಿದ್ದರು. ಆ ಕಾಲದಲ್ಲಿ ಅದು ವಿಶ್ವದಾಖಲೆಯ ಮೊತ್ತವಾಗಿತ್ತು!
  36. ಚೇತನ್‌ ಶರ್ಮ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಮೊದಲ ಕ್ರಿಕೆಟಿಗ (1987ರ ನ್ಯೂಜಿಲ್ಯಾಂಡ್‌ ಎದುರಿನ ನಾಗ್ಪುರ ಪಂದ್ಯ). ಇದು ಭಾರತದ ಮೊದಲ ಹ್ಯಾಟ್ರಿಕ್‌ ಸಾಧನೆಯೂ ಆಗಿದೆ.
  37. ಶ್ರೀಲಂಕಾ ಮತ್ತು ಪಾಕಿಸ್ಥಾನ ಅತೀ ಹೆಚ್ಚು 9 ಹ್ಯಾಟ್ರಿಕ್‌ ಸಾಧನೆ ಮಾಡಿದ ತಂಡಗಳಾಗಿವೆ.
  38. ಲಸಿತ ಮಾಲಿಂಗ 3 ಸಲ ಹ್ಯಾಟ್ರಿಕ್‌ ಸಾಧನೆಗೈದ ವಿಶ್ವದ ಏಕೈಕ ಬೌಲರ್‌.
  39. ಈ ವರೆಗೆ ಇಡೀ ತಂಡ 2 ಸಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರವಾಗಿವೆ. ಇವುಗಳೆಂದರೆ ನ್ಯೂಜಿಲ್ಯಾಂಡ್‌ ಮತ್ತು ಪಾಕಿಸ್ಥಾನ. ಇಲ್ಲಿನ ಜಯದಲ್ಲಿ ತಂಡದ ಪಾಲನ್ನು ಪರಿಗಣಿಸಿ ಈ ಗೌರವ ನೀಡಲಾಗಿತ್ತು.
  40. ಜಾಂಟಿ ರೋಡ್ಸ್‌ ಕೇವಲ ಫೀಲ್ಡಿಂಗಿಗೆ, ಬಾಬ್‌ ವಿಲ್ಲೀಸ್‌ ಕೇವಲ ಕ್ಯಾಪ್ಟನ್ಸಿಗೆ ಪಂದ್ಯಶ್ರೇಷ್ಠ ಗೌರವ ಪಡೆದ ಹೆಗ್ಗಳಿಕೆ ಹೊಂದಿದ್ದಾರೆ.
  41. ಭಾರತ-ಪಾಕಿಸ್ಥಾನ ನಡುವಿನ 1987ರ ಹೈದರಾಬಾದ್‌ ಪಂದ್ಯದಲ್ಲಿ ಮೊದಲ ಸಲ ಟೈ ಬ್ರೇಕರ್‌ ಮೂಲಕ ಫ‌ಲಿತಾಂಶ ದಾಖಲಾಯಿತು. ಎರಡೂ ತಂಡಗಳ ಸ್ಕೋರ್‌ ಸಮನಾದ ಬಳಿಕ ಕಡಿಮೆ ವಿಕೆಟ್‌ ಕಳೆದುಕೊಂಡ ಭಾರತವನ್ನು ವಿಜಯಿ ಎಂದು ಘೋಷಿಸಲಾಯಿತು.
  42. ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವಿನ 1999ರ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯ ಟೈ ಆದಾಗ ಸೂಪರ್‌ ಸಿಕ್ಸ್‌ ವಿಭಾಗದಲ್ಲಿ ಮುಂದಿದ್ದ ಆಸ್ಟ್ರೇಲಿಯಕ್ಕೆ ಫೈನಲ್‌ ಟಿಕೆಟ್‌ ನೀಡಲಾಯಿತು.
  43. 2019ರ ಫೈನಲ್‌ನಲ್ಲಿ ಸೂಪರ್‌ ಓವರ್‌ ಕೂಡ ಟೈ ಆಗಿತ್ತು. ಆಗ ಅತೀ ಹೆಚ್ಚು ಬೌಂಡರಿ ಬಾರಿಸಿದ ಇಂಗ್ಲೆಂಡನ್ನು ಚಾಂಪಿಯನ್‌ ಎಂದು ಘೋಷಿಸಲಾಯಿತು.
  44. ಎಂ.ಎಸ್‌. ಧೋನಿ ಪಂದ್ಯದಲ್ಲಿ ಅತ್ಯಧಿಕ ರನ್‌ ಬಾರಿಸಿದ ಕೀಪರ್‌ ಆಗಿದ್ದಾರೆ (ಅಜೇಯ 183).
  45. ವೆಸ್ಟ್‌ ಇಂಡೀಸ್‌ ಮತ್ತು ಸ್ಕಾಟ್ಲೆಂಡ್‌ ಅತ್ಯಧಿಕ 59 ಎಕ್ಸ್‌ಟ್ರಾ ರನ್‌ ನೀಡಿವೆ. ಎರಡೂ ತಂಡಗಳು ಪಾಕಿಸ್ಥಾನಕ್ಕೆ ಇಷ್ಟೊಂದು ಇತರ ರನ್‌ ಬಿಟ್ಟುಕೊಟ್ಟದ್ದು ಕಾಕತಾಳೀಯ!
  46. ಭಾರತ-ಶ್ರೀಲಂಕಾ ನಡುವಿನ 1992ರ ಮೆಕಾಯ್‌ ಪಂದ್ಯ ಅತೀ ಕಡಿಮೆ ಎಸೆತಗಳಿಗೆ ಸಾಕ್ಷಿಯಾಗಿತ್ತು. ಇಲ್ಲಿ ಕೇವಲ 2 ಎಸೆತಗಳನ್ನು ಎಸೆಯಲಾಗಿತ್ತು.
  47. ಒಟ್ಟು 13 ಪಂದ್ಯಗಳಲ್ಲಿ ತಂಡವೊಂದು ಸರ್ವಾಧಿಕ 9 ಬೌಲರ್‌ಗಳನ್ನು ದಾಳಿಗಿಳಿಸಿದೆ. ಇದರಲ್ಲಿ ಭಾರತ ಮುಂಚೂಣಿಯಲ್ಲಿದೆ (3 ಸಲ). ಈ ಮೂರೂ ಪಂದ್ಯಗಳಲ್ಲಿ ಭಾರತ ಸೋತಿದೆ!
  48. ಅತೀ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಆತಿಥ್ಯ ವಹಿಸಿದ ಮೈದಾನವೆಂಬ ಹೆಗ್ಗಳಿಕೆ ಶಾರ್ಜಾ ಸ್ಟೇಡಿಯಂನದ್ದಾಗಿದೆ. ಇಲ್ಲಿ ಈ ವರೆಗೆ 240 ಪಂದ್ಯಗಳನ್ನು ಆಡಲಾಗಿದೆ.
  49. ಐದು ಸಲ ತಂಡವೊಂದರ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು 6 ಸೊನ್ನೆಗಳು ದಾಖಲಾಗಿವೆ. ಇದರಲ್ಲಿ ಪಾಕಿಸ್ಥಾನಕ್ಕೆ ಅಗ್ರಸ್ಥಾನ (3 ಸಲ).
  50. ಭಾರತ ಸರಣಿಯೊಂದರ ಐದೂ ಪಂದ್ಯಗಳನ್ನು ಸೋತ ಮೊದಲ ತಂಡವಾಗಿದೆ. 1983-84ರಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಈ ಮುಖಭಂಗ ಅನುಭವಿಸಿತ್ತು.
  51. ಆಸ್ಟ್ರೇಲಿಯ-ವೆಸ್ಟ್‌ ಇಂಡೀಸ್‌ ಮೊದಲ ಟೈ ಪಂದ್ಯಕ್ಕೆ ಸಾಕ್ಷಿಯಾದ ತಂಡಗಳಾಗಿವೆ. ಇದು 1984ರ ಮೆಲ್ಬರ್ನ್ ಪಂದ್ಯವಾಗಿತ್ತು.
Advertisement
Advertisement

Udayavani is now on Telegram. Click here to join our channel and stay updated with the latest news.

Next