Advertisement

ಧರ್ಮಸ್ಥಳ ಸಂಸ್ಥೆಯಲ್ಲಿ 50 ಲಕ್ಷ ಮಹಿಳೆಯರ ಸದಸ್ಯತ್ವ: ಡಾ|ಡಿ.ವೀರೇಂದ್ರ ಹೆಗ್ಗಡೆ

03:08 PM Mar 04, 2023 | Team Udayavani |

ಹಾವೇರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಉದ್ದೇಶವೇ ನಮಗೆ ನಾವು ಸಹಾಯ ಮಾಡಿಕೊಳ್ಳುವುದಾಗಿದೆ. ನಮ್ಮ ಸಂಘದಲ್ಲಿ ಈಗಾಗಲೇ 50 ಲಕ್ಷ ಮಹಿಳೆಯರು ಸದಸ್ಯತ್ವ ಪಡೆದುಕೊಂಡಿದ್ದು, 18 ಸಾವಿರ ಕೋಟಿ ರೂ.ನಷ್ಟು ಸಾಲ ಪಡೆದು, ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಬ್ಬೂರು ಗ್ರಾಪಂ, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳ ವತಿಯಿಂದ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಏರ್ಪಡಿಸಿದ್ದ ನಮ್ಮೂರು ನಮ್ಮ ಕೆರೆ ಅನುದಾನದಲ್ಲಿ ಅಭಿವೃದ್ಧಿಪಡಿಸಿದ ಕೆರೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಆರ್ಥಿಕವಾಗಿ ಸದೃಢವಾದ ಮಹಿಳೆಯರು ಕುಟುಂಬ ನಿರ್ವಹಣೆಯೊಂದಿಗೆ ಬ್ಯಾಂಕ್‌ ಜವಾಬ್ದಾರಿ, ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲದೆ, ಗಂಡು ಮಕ್ಕಳು ತಪ್ಪು ಮಾಡಿದರೆ ಅವರ ಕಿವಿ ಹಿಂಡುವಷ್ಟು ಬೆಳೆದಿದ್ದಾರೆ. ಮುಂದೆಯೂ ಎಲ್ಲರೂ ಮಕ್ಕಳಿಗೆ ಶಿಕ್ಷಣ ಒದಗಿಸಿಕೊಡಬೇಕು. ಕಡ್ಡಾಯವಾಗಿ ಶೌಚಗೃಹ ನಿರ್ಮಿಸಿಕೊಳ್ಳಬೇಕು. ಕೆರೆ ಸಂರಕ್ಷಣೆ ಮಾಡಬೇಕು. ಅಭಿವೃದ್ಧಿಪಡಿಸಿದ ಕೆರೆಗಳನ್ನು ಸರಿಯಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ʻನಮ್ಮನ್ನು ದೇವರು ನೋಡಿಕೊಳ್ಳಲಿ, ಸರ್ಕಾರ ನೋಡಿಕೊಳ್ಳಲಿ ಎಂದು ಕುಳಿತುಕೊಳ್ಳುವುದು ಬದುಕಿಗೆ ಅರ್ಥ ಕೊಡುವುದಿಲ್ಲ. ಬದಲಾಗಿ ನಮ್ಮನ್ನು ನಾವೇ ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಿಜವಾದ ಜೀವನ. ಸ್ವ-ಸಹಾಯ ಎಂದರೆ ನಮ್ಮನ್ನು ನಾವೇ ಸಹಾಯ ಮಾಡಿಕೊಳ್ಳುವುದುʼ.
ಡಾ|ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಾಧ್ಯಕ್ಷ

ಈ ಹಿಂದೆ ಮಹಿಳೆಯರು ಕೆರೆಯಿಂದ ನೀರು ತರುತ್ತಿದ್ದರು. ಆದರೀಗ ಸರ್ಕಾರ ಮನೆ ಮನೆಗೆ ನೀರು ಕೊಟ್ಟಿದೆ. ಹಾಗಾಂತ ನಮ್ಮ ಬಳಿಯಿರುವ ಕೆರೆ, ಬಾವಿ ಸೇರಿ ಎಲ್ಲ ರೀತಿಯ ಜಲಮೂಲಗಳನ್ನು ಮಲೀನಗೊಳಿಸಬಾರದು. ಶುಚಿತ್ವದಿಂದ ಎಲ್ಲವನ್ನೂ ಕಾಪಾಡಿಕೊಳ್ಳಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಮಾಳವ್ವ ಕರಿಗಾರ ಅಧ್ಯಕ್ಷತೆ ವಹಿಸಿದ್ದರು.

Advertisement

ಅಂಗವಿಕಲರಿಗೆ ಟ್ರೈಸಿಕಲ್‌ ವಿತರಿಸಲಾಯಿತು. ಸ್ವಸಹಾಯ ಸಂಘದ ಪದಾ ಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕರಿಬಸಪ್ಪ ಹೊಸಳ್ಳಿ, ಗ್ರಾಪಂ ಉಪಾಧ್ಯಕ್ಷ ಪುಟ್ಟಪ್ಪ ಗಿರಿಗೌಡ್ರ, ಮುತ್ತಣ್ಣ ಯಲಿಗಾರ, ಮುರಿಗೆಪ್ಪ ಶೆಟ್ಟರ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next