ಚಿಂಚೋಳಿ: ಪ್ರಧಾನ ಮಂತ್ರಿ ಆಯುಷ್ಮಾನ್ ಆರೋಗ್ಯ ಯೋಜನೆ ಅಡಿಯಲ್ಲಿ ದೇಶದ 50ಕೋಟಿ ಜನತೆ ಪ್ರಯೋಜನ ಪಡೆದಿದ್ದಾರೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.
ತಾಲೂಕಿನ ಸೇಡಂ ಮತಕ್ಷೇತ್ರದ ಸುಲೇಪೇಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ 75ನೇ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತವಾಗಿ ತಾಲೂಕು ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ| ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಬರೆದಂತೆ ದೇಶದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಸಿಗಬೇಕು ಎಂಬುದು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಕನಸಾಗಿದೆ. ದೇಶದಲ್ಲಿ ಮಹಿಳೆಯರ ಆರೋಗ್ಯ ರಕ್ಷಣೆಗಾಗಿ 20ಲಕ್ಷ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದೆ. ಹೊಗೆ ಮುಕ್ತವನ್ನಾಗಿಸಲು 15ಕೋಟಿ ಜನರಿಗೆ ಗ್ಯಾಸ್ ಸಿಲೆಂಡರ್ ನೀಡಲಾಗಿದೆ. ಕೊರೊನಾ ಸಂದರ್ಭದಲ್ಲಿ 200ಕೋಟಿ ಲಸಿಕೆ ನೀಡಿದ್ದು ಕೇಂದ್ರದ ಸಾಧನೆ ಎಂದರು.
ದೇಶದಲ್ಲಿ ಹೊಗೆ, ಧೂಳು ಹಾಗೂ ಬಹಿರ್ದೆಸೆ ಮುಕ್ತವನ್ನಾಗಿಸಲು ಪ್ರಯತ್ನ ಮಾಡಲಾಗಿದೆ. ಕೊರೊನಾ ಸಂದರ್ಭದಲ್ಲಿ 80ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಆಹಾರ ವಿತರಿಸಲಾಗಿದೆ. ಪ್ರತಿಯೊಬ್ಬರು ಆಯುಷ್ಮಾನ ಭಾರತ ಆರೋಗ್ಯ ಕಾರ್ಡು ಪಡೆದುಕೊಂಡರೆ 5ಲಕ್ಷ ರೂ. ವರೆಗೆ ಆರೋಗ್ಯಸೇವೆ ಪಡೆಯಬಹುದು ಎಂದು ಹೇಳಿದರು.
Related Articles
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಶರಣಬಸಪ್ಪ ಗಣಜಲಖೇಡ ಮಾತನಾಡಿ, ಆರೋಗ್ಯ ಇಲಾಖೆಯಿಂದ ಹೊಸದಾಗಿ ಇ ಸಂಜೀವಿನಿ ಯೋಜನೆ ಜಾರಿಗೆ ತರಲಾಗಿದೆ. ಇದರ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಮಹಮ್ಮದ್ ಗಫಾರ, ತಾಲೂಕು ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಆರೋಗ್ಯಮೇಳದ ಕುರಿತು ಮಾತನಾಡಿದರು.
ತಹಶೀಲ್ದಾರ್ ಅಂಜುಮ ತಬಸುಮ, ಜಿಲ್ಲಾ ನೋಡಲ್ ಅಧಿಕಾರಿ ಡಾ| ರಾಜಕುಮಾರ ಕುಲಕರ್ಣಿ, ಡಾ| ವಿಶ್ವನಾಥ ಪವಾರ, ಮುಕುಂದ ದೇಶಪಾಂಡೆ, ವಿಷ್ಣುರಾವ್ ಬಸೂದೆ, ಆತೀಶ ಪವಾರ, ಗ್ರಾಪಂ ಅಧ್ಯಕ್ಷೆ ಸರಸ್ವತಿ ಗಿರಿ, ಉಪಾಧ್ಯಕ್ಷೆ ಸವಿತಾ, ಶರಣು ಮೆಡಿಕಲ್, ಶಿವಶರಣಪ್ಪ ಕುಂಬಾರ, ಧರ್ಮಣ್ಣ ಇಟಗಿ, ಡಾ| ಸಂತೊಷ ಪಾಟೀಲ, ಡಾ| ಜಗದೀಶ್ವರ ಬುಳ್ಳ, ಡಾ| ಕೈಸರ ಫಾತಿಮಾ ಹಾಗೂ ಕಲಬುರಗಿ ನಗರದ ಕಿದ್ವಾಯಿ ಆಸ್ಪತ್ರೆ ವೈದ್ಯರು ಭಾಗವಹಿಸಿದ್ದರು. ಡಾ| ಮಹಮ್ಮದ ಗಫಾರ ಸ್ವಾಗತಿಸಿದರು, ಸೋಮನಾಥರೆಡ್ಡಿ ಗರಗಪಳ್ಳಿ ನಿರೂಪಿಸಿದರು, ಡಾ| ವಿಜಯಕುಮಾರ ಜಾಪಟ್ಟಿ ವಂದಿಸಿದರು.