ಬೆಂಗಳೂರು: ಕಾರು ಹರಿದು 5 ವರ್ಷದ ಮಗುವೊಂದು ಮೃತಪಟ್ಟ ಘಟನೆ ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ರಸ್ತೆ ಮುರುಗೇಶಪಾಳ್ಯ ರಸ್ತೆಯಲ್ಲಿ ಘಟನೆ ಭಾನುವಾರ(ಮೇ.12 ರಂದು) ನಡೆದಿದೆ.
ಆರವ್ (5) ಮೃತ ಮಗು.
ಏನಿದು ಘಟನೆ?: ಭಾನುವಾರ ಬೆಳಗ್ಗೆ 10:30 ರ ವೇಳೆಗೆ 15 ವರ್ಷದ ಬಾಲಕನೊಬ್ಬ ತಂದೆಯ ಜತೆ ಸೇರಿ ಕಾರು ವಾಶ್ ಮಾಡುತ್ತಿದ್ದ. ಈ ವೇಳೆ ಬಾಲಕ ಕಾರಿನ ಸೀಟ್ ನಲ್ಲಿ ಹೋಗಿ ಕೂತಿದ್ದಾನೆ. ಡ್ರೈವಿಂಗ್ ಸೀಟ್‌ನಲ್ಲಿ ಕುಳಿತಿದ್ದ ಬಾಲಕ ಏಕಾಏಕಿ ಎಕ್ಸಿಲೇಟರ್ ತುಳಿದಿದ್ದಾನೆ. ಪರಿಣಾಮ ಅಲ್ಲೇ ಪಕ್ಕದಲ್ಲಿ ಆಡುತ್ತಿದ್ದ ಆರವ್ ಮೇಲೆ ಕಾರು ಹರಿದಿದೆ. ಕಾರು ಹರಿದ ವೇಗಕ್ಕೆ ಮಗು ಆರವ್ ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರು ವೇಗವಾಗಿ ಮಗುವಿನ ಮೇಲೆ ಹರಿದು, ಆ ಬಳಿಕ ಅಕ್ಕಪಕ್ಕದಲ್ಲಿದ್ದ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಇನ್ನೊಬ್ಬ ಬಾಲಕನಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಮೃತ ಆರವ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬಾಲಕನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.