ಬೆಂಗಳೂರು: ನಗರದಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 5006 ಡೆಂಘೀ ಪ್ರಕರಣಗಳು ದಾಖಲಾಗಿವೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಆರೋಗ್ಯ ವಿಭಾಗದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾತನಾಡಿದರು.
ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿರುವ ವಾರ್ಡ್‌ಗಳಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಹಾಗೂ ಡೆಂಘೀ ಪ್ರಕರಣಗಳು ಹೆಚ್ಚಾಗಿರುವ 50 ವಾರ್ಡ್‌ಗಳಲ್ಲಿ ಜಾಗೃತಿ ಮೂಡಿಸಲು 200 ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.
ಪೂರ್ವ, ಮಹದೇವಪುರ ಹಾಗೂ ದಕ್ಷಿಣ ವಲಯಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಭಾಗದಲ್ಲಿ ಒಂದು ತಿಂಗಳು ಸ್ವಯಂ ಸೇವಕರನ್ನು ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸ್ವಯಂ ಸೇವಕರಿಗೆ ಮಾಸಿಕ 15 ಸಾವಿರ ರೂ. ವೇತನ ನೀಡಲಾಗುವುದು. ಅಗತ್ಯಕ್ಕೆ ಅನುಗುಣವಾಗಿ ಅವರ ಸೇವಾ ಅವಧಿಯನ್ನು ಮುಂದುವರೆಸುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದರು.
ಶೇಖರಿಸಿಟ್ಟ ನೀರಿನಿಂದ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಡೆಂಘೀ ಪ್ರಕರಣಗಳು ಹೆಚ್ಚಾಗಿ ರುವುದು ಅಧಿಕಾರಿಗಳು ನಡೆಸಿದ ಸರ್ವೇಯಲ್ಲಿ ಪತ್ತೆಯಾಗಿದೆ. ಹೀಗಾಗಿ, ಸಾರ್ವಜನಿಕರಿಗೆ ನೀರಿನ ಶೇಖರಣೆಯ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ ಮತ್ತು ಡೆಂಘೀ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವ ಪ್ರದೇಶಗಳಲ್ಲಿ ಮೂರರಿಂದ ನಾಲ್ಕು ಗಂನ್‌ಮ್ಯಾನ್‌ಗಳ ಮೂಲಕ ಫಾಗಿಂಗ್ ಮತ್ತು ಔಷಧಿ ಸಿಂಪಡಣೆಯನ್ನು ಮಾಡಲಾಗುತ್ತಿದೆ ಎಂದರು.
ಪ್ಲಾಸ್ಟಿಕ್ ನಿಷೇಧಕ್ಕೆ ಒತ್ತು: ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದ್ದು, ಜು.15ರಿಂದ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಎಲ್ಲ ವಲಯಗಳಲ್ಲೂ ಪ್ಲಾಸ್ಟಿಕ್ ನಿಷೇಧಕ್ಕೆ ಒತ್ತು ನೀಡಿದ್ದು, 24 ಟನ್ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ ಮತ್ತು 2.8 ಕೋಟಿ ರೂ. ದಂಡ ವಿಧಿಸಿದ್ದಾರೆ. ಪ್ಲಾಸ್ಟಿಕ್ ಚೀಲಕ್ಕೆ ಪರ್ಯಾಯವಾಗಿ ಬಟ್ಟೆ,
ಪೇಪರ್, ಜ್ಯೂಟ್ ಬ್ಯಾಗ್ ( ನಾರಿನಿಂದ ತಯಾರಿಸಿದ ಕೈಚೀಲ) ಸೇರಿದಂತೆ ಪರ್ಯಾಯವಾಗಿ ಬಳಸಲು ಸಾಧ್ಯವಿರುವ ವಸ್ತುಗಳನ್ನು ಬಳಸುವುದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆ. ಮೊದಲ ವಾರದಲ್ಲಿ ಮೂರು ದಿನಗಳ ಕಾಲ ಪ್ಲಾಸ್ಟಿಕ್ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ನಗರದಲ್ಲಿ ಸಂಪೂರ್ಣವಾಗಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವುದಕ್ಕೆ ಬಿಬಿಎಂಪಿಯೊಂದಿಗೆ ಪೊಲೀಸ್‌ಇಲಾಖೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರವೂ ಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಅಪರ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗುವುದು ಎಂದರು.
ಮಾರುಕಟ್ಟೆಗಳ ಮೇಲೆ ದಾಳಿ: ನಗರದಲ್ಲಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಮುಂದಿನ ವಾರದಿಂದ ಪಾಲಿಕೆಯ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳ ಸಹಯೋಗದಲ್ಲಿ ಎಲ್ಲ ಮಾರುಕಟ್ಟೆಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ಬಳಸುವವರ ಮೇಲೆ ದಂಡ ವಿಧಿಸಲಾಗುವುದು ಹಾಗೂ ಪರ್ಯಾಯ ಬಳಕೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.