ಇದು ಹಣದ ಮ್ಯಾಜಿಕ್. ತುಂಬಾ ಹಣವೇನೂ ಇದಕ್ಕೆ ಬೇಕಾಗುವುದಿಲ್ಲ. ಕೇವಲ 5 ರೂ. ಅಷ್ಟೆ. ಹಣವನ್ನು ಮಾಯ ಮಾಡುವ ಮ್ಯಾಜಿಕ್ ಯಾವತ್ತೂ ತುಂಬಾ ಸ್ವಾರಸ್ಯಕರ. ಏಕೆಂದರೆ ಸಮಾಜದಲ್ಲಿ ಹಣಕ್ಕೆ ಹೆಚ್ಚು ಬೆಲೆ ಕೊಡುವುದರಿಂದ ಅದನ್ನೇ ಮಾಯ ಮಾಡಿದರೆ ಸಭಿಕರು ಬೆಚ್ಚಿ ಬೀಳುವುದರಲ್ಲಿ ಆಶ್ಚರ್ಯವಿಲ್ಲ.
ಬೇಕಾಗುವ ವಸ್ತು: 5 ರೂ. ನಾಣ್ಯ
ಪ್ರದರ್ಶನ: ಜಾದೂಗಾರ 5 ರೂ. ನಾಣ್ಯವೊಂದನ್ನು ಬಲಗೈಯಲ್ಲಿ ಹಿಡಿದು ಎಡಗೈ ಮೇಲೆ ಚಿತ್ರದಲ್ಲಿ ತೋರಿಸಿರುವಂತೆ ಉಜ್ಜುತ್ತಾನೆ. ನಂತರ ನಾಣ್ಯವನ್ನು ಬಲಗೈ ಮೇಲೆ ಉಜ್ಜಿದರೆ ಚೆನ್ನಾಗಿರುತ್ತೆ ಅಂತ ಕೈ ಅದಲು ಬದಲು ಮಾಡುತ್ತಾನೆ. ಈಗ ಎಡಗೈಯಲ್ಲಿ ನಾಣ್ಯ ಹಿಡಿದು ಬಲಗೈ ಮೇಲೆ ಉಜ್ಜುತ್ತಾನೆ. ಪ್ರೇಕ್ಷಕರು ಎಡಗೈಯನ್ನೇ ನೋಡುತ್ತಿರಲು, ಜಾದೂಗಾರ ಎಡಗೈಯನ್ನು ಪ್ರೇಕ್ಷಕರ ಮುಂದೆ ಹಿಡಿಯುತ್ತಾನೆ. ಅಲ್ಲಿದ್ದ ನಾಣ್ಯ ಮಾಯವಾಗಿರುತ್ತದೆ.
ತಯಾರಿ: ಇದು ಕಣಟ್ಟಿನ ಮ್ಯಾಜಿಕ್. ಪ್ರತಿ ಹಂತದಲ್ಲೂ ಸಭಿಕರಿಗೆ ಗೊತ್ತಾಗದಂತೆ ಅವರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನ ನಡೆಸುತ್ತಲೇ ಇರಬೇಕು. ಮೊದಲಿಗೆ ಜಾದೂಗಾರ ಸಭಿಕರಿಂದಲೇ 5 ರೂ. ನಾಣ್ಯವನ್ನು ಕೇಳಿ ಪಡೆಯಬೇಕು. ಆಗ ಒಮ್ಮೆ ನಾಣ್ಯವನ್ನು ಮಾಯ ಮಾಡಿದ ಮೇಲೆ ಮತ್ತೆ ಹಿಂತಿರುಗಿಸಲು ಆಗುವುದಿಲ್ಲ ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಬಹುದು. ನಿಮ್ಮನ್ನು ಅನುಮಾನಿಸುತ್ತಲೇ ಯಾರಾದರೂ 5 ರೂ. ನಾಣ್ಯವನ್ನು ಕೊಟ್ಟೇ ಕೊಡುತ್ತಾರೆ. ನಾಣ್ಯವನ್ನು ಮೊದಲು ಬಲಗೈಯಲ್ಲಿ ಹಿಡಿದು ಎಡಗೈ ಮೇಲೆ ಉಜ್ಜಬೇಕು. ಈ ಪ್ರಯತ್ನದಲ್ಲಿ ನಾಣ್ಯವನ್ನು ಬೇಕಂತಲೇ ಕೆಳಗೆ ಬೀಳಿಸಿ. ನಾಣ್ಯವನ್ನು ಬಲಗೈಯಲ್ಲಿ ಎತ್ತಿಕೊಂಡು “ನಾಣ್ಯವನ್ನು ಎಡಗೈಯಲ್ಲಿ ಹಿಡಿದರೆ ಚೆನ್ನಾಗಿರುತ್ತೆ’ ಎಂದು ಹೇಳಿ ನಾಣ್ಯವನ್ನು ಬಲಗೈಯಿಂದ ಎಡಗೈಗೆ ಬದಲಾಯಿಸಿದಂತೆ ನಟಿಸಿ. ಹೀಗೆ ಮಾಡುವಾಗ ಚಾಕಚಕ್ಯತೆ ತುಂಬಾ ಅಗತ್ಯ. ಇದುವೇ ಈ ಮ್ಯಾಜಿಕ್‌ನ ಟ್ರಿಕ್. ಆಮೇಲೆ ಎಡಗೈಯಲ್ಲಿಯೇ ನಾಣ್ಯ ಇರುವಂತೆ ನಟಿಸಿ. ಅದೇ ಸಮಯಕ್ಕೆ ನಿಜಕ್ಕೂ 5 ರೂ. ನಾಣ್ಯ ಇರುವ ಬಲಗೈಯನ್ನು ಶರ್ಟು ಮೇಲೆತ್ತಿದಂತೆ ಮಾಡಿ ನಿಮ್ಮ ಹಿಂದುಗಡೆಯೋ ಎಲ್ಲೋ ಬಟ್ಟೆ ಮೇಲೆ ಸದ್ದಾಗದಂತೆ ಬೀಳಿಸಿ. ಈಗ ಎಡಗೈಯನ್ನು ಬಲಗೈ ಮೇಲೆ ಉಜ್ಜಿರಿ. ನಂತರ ಎಡಗೈಯನ್ನು ಪ್ರೇಕ್ಷಕರಿಗೆ ತೋರಿಸಿ.
ವಿನ್ಸೆಂಟ್ ಲೋಬೋ