ಹೊಸದಿಲ್ಲಿ: ಇನ್ನು ಕೆಲವೇ ತಿಂಗಳಲ್ಲಿ ಭೂ ಪರಿವೀಕ್ಷಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕನಿಷ್ಠ 5 ಖಾಸಗಿ ಬಾಹ್ಯಾಕಾಶ ಕಂಪೆನಿಗಳು ಮುಂದೆ ಬಂದಿವೆ ಎಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುತ್ತಿರುವ ನೋಡಲ್ ಏಜೆನ್ಸಿ ದಿ ಇಂಡಿಯನ್ ನ್ಯಾಶನಲ್ ಸ್ಪೇಸ್ ಪ್ರೊಮೋಶನ್ಸ್ ಆ್ಯಂಡ್ ಆಥರೈಸೇಶನ್ ಸೆಂಟರ್(ಇನ್-ಸ್ಪೇಸ್) ಹೇಳಿದೆ.
ಗ್ಯಾಲಕ್ಸ್‌ಐ, ಪಿಕ್ಸೆಲ್, ಧ್ರುವ ಸ್ಪೇಸ್, ಅಝಿಸ್ಟಾ ಬಿಎಸ್‌ಟಿ ಏರೋಸ್ಪೇಸ್ ಮತ್ತು ಕಲೈಡೋಇಒ ಎಂಬ ಕಂಪೆನಿಗಳು ಭೂ ಪರಿವೀಕ್ಷಣ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಗ್ಯಾಲಕ್ಸ್‌ಐ ಸಂಸ್ಥೆಯ “ದೃಷ್ಟಿ’ ಯೋಜನೆಯ ಮೊದಲ ಉಪಗ್ರಹವು ಪ್ರಸಕ್ತ ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ ಉಡಾವಣೆಯಾಗುವ ನಿರೀಕ್ಷೆಯಿದೆ.
ಇನ್ನು ಈಗಾಗಲೇ ಹಲವು ಉಪಗ್ರಹ ಉಡಾಯಿಸಿ ಅನುಭವ ಹೊಂದಿರುವ ಪಿಕ್ಸೆಲ್ ಸಂಸ್ಥೆ ಕೂಡ ಇದೇ ವರ್ಷ 6 ಉಪಗ್ರಹಗಳನ್ನು ಉಡಾವಣೆ ಮಾಡಲು ನಿರ್ಧರಿಸಿದೆ. ಧ್ರುವ ಸ್ಪೇಸ್ ಸಂಸ್ಥೆಯು 2024ರ ಮೊದಲ ತ್ತೈಮಾಸಿಕದಲ್ಲಿ ಭೂ ಪರಿವೀಕ್ಷಣಾ ಉಪಗ್ರಹ ಯೋಜನೆಯನ್ನು ಸಾಕಾರಗೊಳಿಸಲಿದೆ.
ಅಝಿಸ್ಟಾ ಬಿಎಸ್‌ಟಿ ಏರೋಸ್ಪೇಸ್ ತನ್ನ ಮೊದಲ ರಿಮೋಟ್ ಸೆನ್ಸಿಂಗ್ ಉಪಗ್ರಹವನ್ನು, ಕಲೈಡೋಇಒ ಸಂಸ್ಥೆಯು 4 ಉಪಗ್ರಹಗಳ ಪುಂಜವನ್ನು ಇದೇ ವರ್ಷ ಉಡಾವಣೆ ಮಾಡಲಿವೆ ಎಂದೂ ಇನ್‌ಸ್ಪೇಸ್ ತಿಳಿಸಿದೆ.