ಸುವರ್ಣಸೌಧ: ಕರಾವಳಿ, ಮಲೆನಾಡು ಭಾಗದಲ್ಲಿ ನಡೆಯುವ ಕಂಬಳ ಕ್ರೀಡೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಕಂಬಳಕ್ಕೆ 5 ಲಕ್ಷ ರೂ.ಗಳ ಪ್ರೋತ್ಸಾಹ ಧನ ನೀಡಬೇಕೆಂದು ಕಾಂಗ್ರೆಸ್‌ನ ಐವನ್ ಡಿ’ಸೋಜಾ ಒತ್ತಾಯಿಸಿದರು.
ವಿಧಾನಪರಿಷತ್ತು ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಕ್ರೀಡೆ ನಡೆಯುತ್ತಿದ್ದು, ಸರಿಸುಮಾರು 1 ಲಕ್ಷಕ್ಕೂ ಅಧಿಕ ಜನರು ಕಂಬಳ ವೀಕ್ಷಣೆ ಮಾಡುತ್ತಾರೆ.
ಪ್ರಸ್ತುತ ಸುಮಾರು 25 ಕಂಬಳಗಳು ನಡೆಯುತ್ತಿದ್ದು, ಪ್ರತಿ ಕಂಬಳಕ್ಕೂ 5 ಲಕ್ಷ ರೂ.ಗಳನ್ನು ನೀಡಬೇಕು, ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಕಂಬಳಕ್ಕೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸಭಾನಾಯಕ ಎನ್.ಎಸ್.ಬೋಸರಾಜ್, ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.