ಬೆಂಗಳೂರು: ಸರ್ವರಿಗೂ ಸೂರು ಯೋಜನೆ ಅಡಿ ರಾಜ್ಯ ಸರ್ಕಾರ ಬಡವರಿಗೆ ಬಂಪರ್ ಗಿಫ್ಟ್ ನೀಡಿದೆ. ಸರಿಸುಮಾರು 1.30 ಲಕ್ಷ ಫಲಾನುಭವಿಗಳಿಗೆ ರಾಜ್ಯ ಸರ್ಕಾರವೇ ಒಟ್ಟು 5 ಲಕ್ಷ ರೂ. ಭರಿಸಲು ತೀರ್ಮಾನ ಮಾಡಲಾಗಿದೆ. ಅಂದರೆ 2 ಲಕ್ಷ ರೂಪಾಯಿ ಸಬ್ಸಿಡಿ ಜತೆಗೆ ಹೆಚ್ಚುವರಿ 3 ಲಕ್ಷ ರೂಪಾಯಿಯನ್ನು ಭರಿಸುವ ತೀರ್ಮಾನಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಬರಲಾಗಿದೆ.
ಸರ್ವರಿಗೂ ಸೂರು ಯೋಜನೆ ಅಡಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ಬಡ ಕುಟುಂಬಗಳಿಗಾಗಿ ನಿರ್ಮಿಸಲಾಗುತ್ತಿರುವ ಒಟ್ಟಾರೆ 1,29,457 ಮನೆಗಳಿಗೆ ಫಲಾನುಭವಿಗಳ ವಂತಿಗೆಯನ್ನು ಸರ್ಕಾರ ಭರಿಸಲು ತೀರ್ಮಾನಿಸಿದೆ. ಈ ಮೂಲಕ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಕ್ತಿ ದೊರೆಯಲಿದೆ.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದರೊಂದಿಗೆ ಯೋಜನೆ ಅಡಿ ಪ್ರಸ್ತುತ ಪ್ರತಿ ಮನೆ ನಿರ್ಮಾಣಕ್ಕೆ ಒಟ್ಟು 7.5 ಲಕ್ಷ ರೂ. ಖರ್ಚಾಗುತ್ತದೆ. ಇದರಲ್ಲಿ ಕೇಂದ್ರದಿಂದ 1.5 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಸಬ್ಸಿಡಿ ಸಿಗುತ್ತದೆ. ಉಳಿದ ಹಣವನ್ನು ಫಲಾನುಭವಿಯೇ ಕಟ್ಟಬೇಕಿತ್ತು. ಈಗ ಆ ಪೈಕಿ 1 ಲಕ್ಷ ರೂ. ಪಾವತಿಸಿದರೆ ಸಾಕು, ಉಳಿದ ಹೆಚ್ಚುವರಿ 3 ಲಕ್ಷ ರೂಪಾಯಿಯನ್ನು ಸಹ ಸರ್ಕಾರವೇ ಭರಿಸಲಿದೆ. ಈ ಮೂಲಕ ಸರ್ಕಾರ ಒಟ್ಟು 5 ಲಕ್ಷ ರೂ. ಕಟ್ಟಿದಂತೆ ಆಗುತ್ತದೆ.
ಸರ್ವರಿಗೂ ಸೂರು ಯೋಜನೆ ಅಡಿ ನಿರ್ಮಿಸಲಾಗುವ ಮನೆಗಳ ನಿರ್ಮಾಣದ ವಂತಿಗೆಯನ್ನು ಸರ್ಕಾರವೇ ಭರಿಸಲು ಒಪ್ಪಿಗೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿರ್ಮಾಣದ ವಿವಿಧ ಹಂತದಲ್ಲಿರುವ 1.29 ಲಕ್ಷ ಮನೆಗಳಿಗೆ ಎಷ್ಟು ವೆಚ್ಚ ಆಗುತ್ತದೆ. ಈ ವರ್ಷ ಗರಿಷ್ಠ ಎಷ್ಟು ಕೊಡಬಹುದು? ಮುಂದಿನ ವರ್ಷ ಎಷ್ಟು ಕೊಡಬಹುದು? ಎಂಬುದರ ಬಗ್ಗೆ ಪರಿಶೀಲಿಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಎರಡನೇ ಹಂತದಲ್ಲಿ 39, 966 ಮನೆ ಹಂಚಿಕೆಗೆ ಸಿದ್ಧವಿದ್ದು 862 ಕೋಟಿ ರೂ. ಅಗತ್ಯವಿದೆ. ಅದೇ ರೀತಿ, ರಾಜೀವ್‌ಗಾಂಧಿ ವಸತಿ ನಿಗಮ ವತಿಯಿಂದ ಮೊದಲ ಹಂತದಲ್ಲಿ ಹಂಚಿಕೆಗೆ 11,406 ಮನೆ ಸಿದ್ಧವಿದ್ದು, 529 ಕೋಟಿ ರೂ. ಅವಶ್ಯಕತೆ ಇದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸಭೆಯಲ್ಲಿ ಮುಖ್ಯಮಂತ್ರಿ ಗಮನಕ್ಕೆ ತಂದರು. ಈ ಮೊದಲು ಕೊಳೆಗೇರಿ ಅಭಿವೃದ್ಧಿ ಮಂಡಳಿ ಯೋಜನೆಗೆ ಅನುಮತಿ ದೊರೆತಿತ್ತು. ಬುಧವಾರದ ಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗೂ ಅನ್ವಯ ಮಾಡಲು ತಾತ್ವಿಕ ಒಪ್ಪಿಗೆ ದೊರೆಯಿತು.
ಸಭೆಯಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇ ಗೌಡ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕವಿತಾ ಮಣ್ಣಿಕೇರಿ, ಸುಶೀಲಮ್ಮ ಉಪಸ್ಥಿತರಿದ್ದರು.
2.32 ಲಕ್ಷ ಮನೆ ಅತಂತ್ರಗೊಂಡಿದ್ದೇ ನಿರ್ಧಾರಕ್ಕೆ ಕಾರಣ
ಸರ್ವರಿಗೂ ಸೂರು ಯೋಜನೆ ಅಡಿ 2013ರಿಂದ 2023ರವರೆಗೆ ಮಂಜೂರು ಮಾಡಿದ್ದ ವಸತಿ ಯೋಜನೆಯಡಿ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿ ಮಾಡಲು ಸಾಧ್ಯವಾಗದೆ 2.32 ಲಕ್ಷ ಮನೆಗಳ ನಿರ್ಮಾಣ ನೆನೆಗುದಿಗೆ ಬಿದ್ದಿವೆ. ಇದನ್ನು ಸಚಿವ ಜಮೀರ್ ಅಹ್ಮದ್ ಖಾನ್, ಸಭೆಯಲ್ಲಿ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟರು. ಪರಿಣಾಮ ಪ್ರತಿ ಕುಟುಂಬದ ಫಲಾನುಭವಿ ವಂತಿಗೆ ಹಣವನ್ನು ಸರ್ಕಾರವೇ ಭರಿಸುವ ತೀರ್ಮಾನ ಕೈಗೊಳ್ಳಲಾಯಿತು. ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ, ಜಮೀರ್ ಅಹಮದ್ ಇತರರು.