Advertisement

Rain ವಾಡಿಕೆಯಂತೆ ಹಿಂಗಾರು ಪೂರ್ಣ ಕರಾವಳಿಯಲ್ಲಿ ಶೇ.5 ಮಳೆ ಹೆಚ್ಚಳ

11:25 PM Dec 31, 2023 | Team Udayavani |

ಮಂಗಳೂರು: ವಾಡಿಕೆಯಂತೆ ಈ ಬಾರಿಯ ಹಿಂಗಾರು ಪೂರ್ಣಗೊಂಡಿದೆ. ಕರಾವಳಿ ಭಾಗದಲ್ಲಿ ಶೇ. 5ರಷ್ಟು ಮಳೆ ಹೆಚ್ಚಳವಾಗಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಶೇ.69, ದಕ್ಷಿಣ ಒಳನಾಡಿನಲ್ಲಿ ಶೇ.31, ಮಲೆನಾಡಿನಲ್ಲಿ ಶೇ.15ರಷ್ಟು ಮಳೆ ಕೊರತೆ ಇದೆ. ಇದಕ್ಕೆ ಹೋಲಿಸಿದರೆ ರಾಜ್ಯದಲ್ಲೇ ಹೆಚ್ಚಿನ ಮಳೆ ಕರಾವಳಿಯಲ್ಲಿ ದಾಖಲಾಗಿದೆ.

Advertisement

ಅ.1ರಿಂದ ಡಿ.31ರ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ 376 ಮಿ.ಮೀ. ವಾಡಿಕೆ ಮಳೆಯಲ್ಲಿ 549 ಮಿ.ಮೀ. ಮಳೆಯಾಗಿ ಶೇ.46, ಉಡುಪಿ ಜಿಲ್ಲೆಯಲ್ಲಿ 312 ಮಿ.ಮೀ. ವಾಡಿಕೆ ಮಳೆಯಲ್ಲಿ 316 ಮಿ.ಮೀ. ಮಳೆಯಾಗಿ ಶೇ.1 ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ 187 ಮಿ.ಮೀ. ವಾಡಿಕೆ ಮಳೆಯಲ್ಲಿ 126 ಮಿ.ಮೀ. ಮಳೆಯಾಗಿ ಶೇ.32ರಷ್ಟು ಮಳೆ ಕೊರತೆ ಇದೆ.

ಮುಂಗಾರಿನಲ್ಲಿ ಕ್ಷೀಣ;
ಹಿಂಗಾರಿನಲ್ಲಿ ಹೆಚ್ಚಳ
ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದರೆ, ಹಿಂಗಾರು ವೇಳೆ ವಾಡಿಕೆಯಂತೆ ಅಥವಾ ವಾಡಿಕೆಗಿಂತ ಅಧಿಕ ಮಳೆ ಸುರಿಯುತ್ತದೆ. ಈ ಬಾರಿಯ ಮುಂಗಾರಿನಲ್ಲಿ ಕರಾವಳಿಯಲ್ಲಿ ಶೇ.19ರಷ್ಟು ಕಡಿಮೆ ಮಳೆ ಸುರಿದಿತ್ತು. ಮಳೆ ಕೊರತೆಯ ಪರಿಣಾಮ ಹಿಂಗಾರು ಅವಧಿಯಲ್ಲಿ ಯಥೇತ್ಛ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಜ್ಞರ ಅಭಿಪ್ರಾಯವಾಗಿತ್ತು. ಅದರಂತೆ ಈ ಬಾರಿ ವಾಡಿಕೆಗಿಂತ ತುಸು ಅಧಿಕ ಹಿಂಗಾರು ಮಳೆ ಸುರಿದಿದೆ.

ಮುಂಗಾರು ಅವಧಿಯಲ್ಲಿ ಮಳೆ ಸರಾಸರಿಗಿಂತ ಕಡಿಮೆ ಬಂದಾಗ ವಾತಾವರಣದಲ್ಲಿ, ಭೂಮಿಯಲ್ಲಿ ನೀರಿನ ಅಂಶ ಕಡಿಮೆ ಇರುತ್ತದೆ. ಆಗ ಉಷ್ಣಾಂಶ ತನ್ನಿಂತಾನೇ ಏರಿಕೆಯಾಗುತ್ತದೆ. ಆ ವೇಳೆ ವಾತಾವರಣದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಆಗ ಸುತ್ತಲಿನ ಮೋಡ ಚಲನೆಯಿಂದಾಗಿ ಮಳೆಯಾಗುತ್ತದೆ. ಇದೇ ಕಾರಣಕ್ಕೆ ಮುಂಗಾರು ಕಡಿಮೆಯಾದ ವರ್ಷಗಳಲ್ಲಿ ಹಿಂಗಾರು ಜಾಸ್ತಿ ಇರುತ್ತದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next