Advertisement

ನರೇಗಾದಡಿ 3 ತಿಂಗಳುಗಳಲ್ಲಿ 5 ಕೋಟಿ ಮಾನವ ದಿನ ಉದ್ಯೋಗ ಸೃಷ್ಟಿ

01:25 AM Jul 17, 2020 | Hari Prasad |

ಬೆಂಗಳೂರು: ಜಗತ್ತಿನಾದ್ಯಂತ ಲಾಕ್‌ಡೌನ್‌ ಬಳಿಕ ಎಲ್ಲ ಕಡೆ ಉದ್ಯೋಗ ನಷ್ಟದ ಸುದ್ದಿಯೇ ಕೇಳಿ ಬರುತ್ತಿದೆ.

Advertisement

ಆದರೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಮೂಲಕ 3 ತಿಂಗಳುಗಳಲ್ಲಿ ದಾಖಲೆ ಉದ್ಯೋಗ ಸೃಷ್ಟಿಸಲಾಗಿದೆ.

ಹಳ್ಳಿಗಳಿಗೆ ಹಿಂದಿರುಗಿದವರೂ ಉದ್ಯೋಗ ಕಂಡುಕೊಳ್ಳುತ್ತಿರುವುದು ಇದಕ್ಕೆ ಪ್ರಮುಖ ಕಾರಣ.

ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ನಗರಗಳಿಗೆ ವಲಸೆ ಹೋಗಿದ್ದ ಕಾರ್ಮಿಕರಲ್ಲಿ ಬಹುತೇಕರು ಹಳ್ಳಿಗಳಿಗೆ ಮರಳಿದ್ದು, ಅವರಲ್ಲಿ ಈ 3 ತಿಂಗಳಲ್ಲಿ ಸುಮಾರು 2.24 ಲಕ್ಷ ಮಂದಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಜಾಬ್‌ಕಾರ್ಡ್‌ ಪಡೆದಿದ್ದಾರೆ.

ವಿಶೇಷವಾಗಿ ಬಳ್ಳಾರಿ, ಕಲಬುರಗಿ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮೇಯಲ್ಲಿ ಪ್ರತೀ ದಿನ 1 ಲಕ್ಷದಿಂದ 1.10 ಲಕ್ಷ ಕಾರ್ಮಿಕರು ಕೂಲಿ ಮಾಡಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಪ್ರತೀ ದಿನ ಸುಮಾರು 50ರಿಂದ 80 ಸಾವಿರ ಜನರು ಕೂಲಿ ಮಾಡಿದ್ದಾರೆ.

Advertisement

ಎಪ್ರಿಲ್‌ನಿಂದ ಜು.15ರ ವರೆಗೆ ರಾಜ್ಯದಲ್ಲಿ 5.34 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ನಿರೀಕ್ಷಿತ ಗುರಿಗಿಂತ ಶೇ.28ರಷ್ಟು ಹೆಚ್ಚು ಮಾನವ ದಿನಗಳ ಸೃಷ್ಟಿ ಆಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

13 ಕೋಟಿ ಮಾನವ ದಿನಗಳ ಗುರಿ
ಈ ವರ್ಷ ಸುಮಾರು 13 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನೆ ಹಾಕಿಕೊಂಡಿದೆ. ಕಳೆದ ವರ್ಷಕ್ಕಿಂತ 1 ಕೋಟಿ ಮಾನವ ದಿನಗಳ ಉದ್ಯೋಗ ಹೆಚ್ಚುವರಿಯಾಗಿ ಸೃಷ್ಟಿಸಲು ನಿರ್ಧರಿಸಲಾಗಿದೆ. ಈಗಾಗಲೇ ಮೂರು ತಿಂಗಳಲ್ಲಿ 5 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿರುವುದರಿಂದ ಒಟ್ಟು ಸುಮಾರು 15 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ
ಈ ವರ್ಷ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ನಿರ್ದೇಶನದ ಮೇರೆಗೆ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ರೈತರು ತಮ್ಮ ಹೊಲಗಳಲ್ಲಿಯೇ ಬದು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿ ಒಂದು ತಿಂಗಳು ಬದು ಮಾಸ ಆಚರಿಸಲಾಗಿತ್ತು. ಪರಿಣಾಮವಾಗಿ ಸುಮಾರು 65 ಸಾವಿರ ರೈತರ ಹೊಲಗಳಲ್ಲಿ ಬದು ನಿರ್ಮಿಸಲಾಗಿದೆ.

ಮುಂದುವರಿದ ಭಾಗವಾಗಿ ಬದು ಬೇಸಾಯ ಮಾಸಾಚರಣೆ ಮಾಡಲಾಗುತ್ತಿದ್ದು, ಬದುಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಉತ್ತೇಜನ ನೀಡಲಾಗುತ್ತಿದೆ. ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಮೂರು ತಿಂಗಳಲ್ಲಿ 16 ಸಾವಿರ ಕೃಷಿ ಹೊಂಡ ನಿರ್ಮಿಸಲಾಗಿದೆ. ದೇಗುಲಗಳ ಕಲ್ಯಾಣಿಗಳ ಪುನಶ್ಚೇತನಕ್ಕೂ ಆದ್ಯತೆ ನೀಡಲಾಗಿದೆ.

– ನರೇಗಾ ನೋಂದಾಯಿತ ಕುಟುಂಬಗಳು: 66.49 ಲಕ್ಷ
– ಯೋಜನೆಯಡಿ ಉದ್ಯೋಗಕ್ಕೆ ಅರ್ಹರು: 1.56 ಲಕ್ಷ
– ಉದ್ಯೋಗ ಪಡೆಯುತ್ತಿರುವ ಕುಟುಂಬಗಳು: 35.74 ಲಕ್ಷ
– ಉದ್ಯೋಗ ಪಡೆಯುತ್ತಿರುವ ಜನರ ಸಂಖ್ಯೆ: 70.32 ಲಕ್ಷ

ನರೇಗಾ ಅಡಿಯಲ್ಲಿ ಈ ವರ್ಷ ಸಾಕಷ್ಟು ಕೆಲಸಗಳು ಆಗುತ್ತಿವೆ. ಈಗಾಗಲೇ 5 ಕೋಟಿಗೂ ಹೆಚ್ಚು ಮಾನವ ದಿನಗಳ ಉದ್ಯೋಗ ಸೃಷ್ಟಿ ಮಾಡಿದ್ದೇವೆ. 2 ಲಕ್ಷಕ್ಕೂ ಹೆಚ್ಚು ಜನರಿಗೆ ಹೊಸ ಜಾಬ್‌ ಕಾರ್ಡ್‌ ನೀಡಲಾಗಿದೆ. ರೈತರ ಹೊಲಗಳಲ್ಲಿ ಬದು ನಿರ್ಮಾಣ ಮತ್ತು ಕೃಷಿ ಹೊಂಡಗಳ ನಿರ್ಮಾಣ ಹೆಚ್ಚಾಗಿದೆ.
– ಅನಿರುದ್ಧ್ ಶ್ರವಣ್‌, ಆರ್‌ಡಿಪಿಆರ್‌ ಇಲಾಖೆ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next