ಮಣಿಪಾಲ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಂಘಟನಾತ್ಮಕ ರ್‍ಯಾಲಿ, ಸಮಾವೇಶ ನಡೆಯುತ್ತಿದ್ದು, ಡಿಸೆಂಬರ್-ಜನವರಿ ತಿಂಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 5 ಪ್ರಮುಖ ಸಮಾವೇಶ ನಡೆಸಲಿದ್ದೇವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮೈಸೂರಿನಲ್ಲಿ ಎಸ್ಸಿ ಮೋರ್ಚಾ, ಶಿವಮೊಗ್ಗದಲ್ಲಿ ಯುವಮೋರ್ಚಾ, ಹುಬ್ಬಳ್ಳಿಯಲ್ಲಿ ರೈತಮೋರ್ಚಾ, ವಿಜಯಪುರದಲ್ಲಿ ಅಲ್ಪಸಂಖ್ಯಾಕರ ಮೋರ್ಚಾ ಹಾಗೂ ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಪ್ರತ್ಯೇಕ ಮೂರು ತಂಡ ರಚನೆ ಮಾಡಿದ್ದು, ರಾಜ್ಯಾದ್ಯಂತ ಪ್ರವಾಸ, ಸಮಾವೇಶ, ಜನಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ಎಲ್ಲೆಡೆಯಿಂದಲೂ ಅಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.
ಭಯೋತ್ಪಾದಕರಿಗೆ ಕಾಂಗ್ರೆಸ್ ಪ್ರೋತ್ಸಾಹ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸುಮಾರು 1,680 ಪಿಎಫ್ಐ ಮೊದಲಾದ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಪ್ರಕರಣವನ್ನು ಖುಲಾಸೆಗೊಳಿಸಿದ್ದರು. ಅದರ ಪರಿಣಾಮವೇ ಈಗ ನಾವು ಕಾಣುತ್ತಿರುವ ವಿಧ್ವಂಸಕ ಚಟುವಟಿಕೆಗಳು. ಕೇಂದ್ರ ಸರಕಾರ ಪಿಎಫ್ಐ ಬ್ಯಾನ್ ಮಾಡಿದ ಅನಂತರದಲ್ಲಿ ಕರಾವಳಿ ಭಾಗದಲ್ಲಿ ದುಷ್ಕೃತ್ಯಗಳು ಹೆಚ್ಚಾಗುತ್ತಿವೆ. ಇದಕ್ಕೆಲ್ಲ ಕಾಂಗ್ರೆಸ್ ಈ ಹಿಂದೆ ಆ ಸಂಘಟನೆಗಳಿಗೆ ನೀಡಿರುವ ಪ್ರೋತ್ಸಾಹವೇ ಕಾರಣ ಎಂದು ಆರೋಪಿಸಿದರು.