Advertisement

ಸಾರಿಗೆ ಸಂಸ್ಥೆಗೆ 5.30 ಕೋಟಿ ರೂ. ನಷ್ಟ

12:27 AM Mar 18, 2020 | Lakshmi GovindaRaj |

ಬೆಂಗಳೂರು: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಇದುವರೆಗೂ ಸುಮಾರು 5.30 ಕೋಟಿ ರೂ.ನಷ್ಟ ಸಂಭವಿಸಿದೆ. ಕೊರೊನಾ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ವಿವಿಧ ಭಾಗಗಳಿಗೆ ತೆರಳುವ ಸುಮಾರು 818 ಬಸ್‌ಗಳ ಸಂಚಾರವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರದ್ದುಪಡಿಸಿದೆ.

Advertisement

ಇದರ ಜತೆಗೆ ಸರ್ಕಾರ ಈಗಾಗಲೇ ಶಿಕ್ಷಣ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕೂಡ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಅವತಾರ್‌ ಟಿಕೇಟ್‌ ಬುಕ್ಕಿಂಗ್‌ (ಆನ್‌ ಲೈನ್‌) 5,500ಕ್ಕೆ ಕುಸಿದಿದೆ (ಈ ಹಿಂದೆ ಪ್ರತಿದಿನ 22,000-23,000 ಗಳಿತ್ತು).

ಅಲ್ಲದೆ, ಸಾರಿಗೆ ಸಂಸ್ಥೆಯ ಬಸ್‌ಗಳ ಸ್ವತ್ಛತಾ ಕಾರ್ಯಗಳನ್ನು ಪರಿಣಾಮಕಾರಿ ಗೊಳಿಸಲಾಗಿದೆ. ಸ್ಯಾನಿಟೈಜರ್‌ ಸೇರಿದಂತೆ ಇನ್ನಿತರ ಅಗತ್ಯ ಪರಿಕರಗಳನ್ನು ಕಡ್ಡಾಯವಾಗಿ ಘಟಕಗಳಲ್ಲಿ ಇರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾತ್ಕಾಲಿಕವಾಗಿ ರದ್ದು: ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಹಲವು ರೀತಿಯ ಕಟ್ಟೆಚ್ಚರಗಳನ್ನು ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಸಾರಿಗೆ ನಿಗಮದ ಪ್ರತಿಷ್ಠಿತ ವಾಹನಗಳಲ್ಲಿ ನೀಡಲಾಗುತ್ತಿರುವ ಹೊದಿಕೆ ಸೇರಿದಂತೆ ಇನ್ನಿತರ ಸಾಮಗ್ರಿ ನೀಡುವುದನ್ನು ತಾತ್ಕಾಲಿಕವಾಗಿ ರದ್ದಪಡಿಸಲಾಗಿದೆ. ಈ ಕಾರಣದಿಂದಾಗಿ ತಮಗೆ ಬೇಕಾದ ಅಗತ್ಯ ಪರಿಕಗಳನ್ನು ತಾವೇ ತರುವಂತೆ ಸಾರ್ವಜನಿಕರಿಗೆ ಸಾರಿಗೆ ಸಂಸ್ಥೆ ಮನವಿ ಮಾಡಿದೆ.

ಮಾಸ್ಕ್ ವಿತರಿಸಲು ಸೂಚನೆ: ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಚಾಲನಾ ಸಿಬ್ಬಂದಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಗಮದ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಮಾಸ್ಕ್ ನೀಡುವಂತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಮಾ.31ರವರೆಗಿನ ಶಾಲಾ ಶಿಕ್ಷಕರ ಚಟುವಟಿಕೆ ಪಟ್ಟಿ ಪ್ರಕಟ: ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್‌ಡಿಎಂಸಿ) ಜತೆ ಸೇರಿ ಶಾಲೆ ಯಲ್ಲಿ ಲಭ್ಯವಿರುವ ಭೌತಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಶಾಲಾಭಿವೃದ್ಧಿಗೆ ಅಗತ್ಯವಿರುವ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಿಸಿದೆ.

ಕೊರೊನಾ ಭೀತಿಯಿಂದ ರಾಜ್ಯದ ಶಾಲಾ, ಕಾಲೇಜುಗಳಿಗೆ ರಜಾ ನೀಡಲಾಗಿದೆ. ಶಿಕ್ಷಕರಿಗೂ ರಜಾ ನೀಡಬೇಕು ಎಂಬ ಒತ್ತಡ ಸರ್ಕಾರಕ್ಕೆ ಬರುತ್ತಲೇ ಇರುವುದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕರು ಶಾಲೆಗೆ ಬಂದು ಏನೇನು ಕಾರ್ಯ ಮಾಡಬೇಕು ಎಂಬುದಕ್ಕೆ ಸಮಗ್ರ ವಾದ ಮಾಹಿತಿಯ ಸುತ್ತೋಲೆಯನ್ನು ಮಂಗಳ ವಾರ ಹೊರಡಿಸಿದೆ.

ಮಾ.31ರ ವರೆಗೆ ಶಿಕ್ಷಕರು ಶಾಲೆಯಲ್ಲಿ ಮಾಡಬೇಕಿರುವ ಕರ್ತವ್ಯಗಳ ಕುರಿತು ಪಟ್ಟಿ ಬಿಡುಗಡೆದೆ. 2020-21ರ ಶಾಲಾ ಶೈಕ್ಷಣಿಕ ಯೋಜನೆ ಸಿದ್ಧಪಡಿಸುವುದು. ಶಾಲಾ ಎಸ್‌ಡಿಎಂಸಿ ಜತೆ ಸೇರಿ ಯೋಜನೆ ಚರ್ಚಿಸುವುದು ಮತ್ತು ಅಂತಿಮ ಗೊಳಿಸುವುದು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಸಭೆ ನಡೆಸಿ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ಸಿದ್ಧಪಡಿಸುವುದು.

ಮುಂದಿನ ಶೈಕ್ಷಣಿಕ ಸಾಲಿನ ವೇಳಾಪಟ್ಟಿ, ತರಗತಿ ವೇಳಾಪಟ್ಟಿ ಸಿದ್ಧಪಡಿಸುವುದು, ಶಾಲಾ ಗ್ರಂಥಾಲಯದ ಪುಸ್ತಕಗಳನ್ನು ಭೂಪಟ, ಕ್ರೀಡಾ ಸಾಮಾಗ್ರಿಗಳನ್ನು ಮಕ್ಕಳ ಬಳಕೆಗೆ ಅನುಕೂಲವಾಗುವಂತೆ ವಿಂಗಡಿಸುವುದು, ಚಿತ್ರಕಲಾ ಹಾಗೂ ವೃತ್ತಿ ಶಿಕ್ಷಕರಿಂದ ಶಾಲಾ ಸೌಂದಯೀಕರಣ ಹಾಗೂ ಪಾಠೊಪಕರಣಗಳ ತಯಾರಿಸುವಂತೆ ಸೂಚನೆ ನೀಡಿದೆ.

ಎಲ್ಲ ಜಿಲ್ಲೆಗಳಲ್ಲಿಯೂ ಪರೀಕ್ಷಾ ಕೇಂದ್ರಕ್ಕೆ ಆಗ್ರಹ: ಜಗತ್ತಿನಾದ್ಯಂತ ಕೊರೊನಾ ವೈರಸ್‌ ತಲ್ಲಣ ಮೂಡಿಸಿದ್ದು, ರಾಜ್ಯದಲ್ಲಿ ಸೋಂಕಿತರ ಪರೀಕ್ಷೆಗೆ ಕೇಂದ್ರಗಳಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪರೀಕ್ಷಾ ಕೇಂದ್ರ ತೆರೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 115 ಜನರಿಗೆ ಕೊರೊನಾ ಸೋಂಕು ತಗುಲಿದೆ.

ರಾಜ್ಯ ಸರ್ಕಾರ ಈಗ್ಗಾಗ್ಗೆ ಸೂಕ್ತ ಮುಂಜಾಗರುಕತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ಕೊರೊನಾ ವೈರಸ್‌ ಪತ್ತೆಗೆ ಕೇವಲ ನಾಲ್ಕು ಪರೀಕ್ಷಾ ಕೇಂದ್ರಗಳಿವೆ. ಕೇವಲ ಬೆಂಗಳೂರು ಮೈಸೂರಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ಮಾಡಿದರೆ ಸಾಕಾಗುವುದಿಲ್ಲ. ಪ್ರತಿ ಜಿಲ್ಲೆಯಲ್ಲಿಯೂ ಒಂದು ಪರೀಕ್ಷಾ ಕೇಂದ್ರ ತೆರೆಯಬೇಕು. ಬೆಂಗಳೂರಿನಲ್ಲಿ ಇನ್ನೂ ನಾಲ್ಕೈದು ಪರೀಕ್ಷಾ ಕೇಂದ್ರ ತೆರೆಯಬೇಕು.

ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಲಬುರಗಿಯಲ್ಲಿ ವೈದ್ಯರಿಗೆ ಸೋಂಕು ತಗುಲಿದೆ. ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್‌, ಮಾಸ್ಕ್ ಸಿಗುತ್ತಿಲ್ಲ. ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಸೋಂಕು ತಡೆಯಲು ಸರ್ಕಾರ ಎಷ್ಟಾದರೂ ಹಣ ಖರ್ಚು ಮಾಡಲಿ. ಈ ವಿಷಯದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ.

ಕೊರೊನಾ ವೈರಸ್‌ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಅಮೇರಿಕಾ ಸರ್ಕಾರ 35 ಕೋಟಿ ರೂ. ಮೀಸಲಿಟ್ಟಿದೆ. ನಮ್ಮ ಕೇಂದ್ರ ಸರ್ಕಾರವೂ ಕೊರೊನಾ ಕುರಿತು ಜಾಗೃತಿಗೆ ಹೆಚ್ಚಿನ ಹಣ ನೀಡಬೇಕು. ಇಟಲಿಯಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.

ಇದೇ ವೇಳೆ, ಕೇಂದ್ರ ಸರ್ಕಾರ ಮಧ್ಯಪ್ರದೇಶದಲ್ಲಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ. ಇದು ಸಂವಿಧಾನ ಬಾಹಿರ ಕೆಲಸವಾಗಿದ್ದು, ಖಂಡಿಸುವುದಾಗಿ ಹೇಳಿದರು. ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಗುಜರಾತ್‌ನಲ್ಲಿಯೂ ಆಪರೇಷನ್‌ ಕಮಲ ಮಾಡಿದ್ದರು. ದೇಶದಲ್ಲಿ ಪ್ರತಿಪಕ್ಷಗಳೇ ಇರಬಾರದು ಎನ್ನುವುದು ಬಿಜೆಪಿ ಧೋರಣೆಯಾಗಿದೆ ಎಂದು ಹೇಳಿದರು.

ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ ರದ್ದು: ಕೊರೊನಾ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಗ್ರಾಮದಲ್ಲಿ ಮಾ.22 ರಿಂದ 25ರ ವರೆಗೆ ನಡೆಯಬೇಕಾಗಿದ್ದ “16ನೇ ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ವನ್ನು ರದ್ದು ಪಡಿಸ ಲಾಗಿದೆ. ಈ ಕಾರ್ಯಕ್ರಮದ ಬದಲಾಗಿ ಮಾ.22 ರಂದು ಕೊರೊನಾ ವೈರಾಣು ಕುರಿತ ಜಾಗೃತಿ ಮತ್ತು ಉಚಿತ ವೈದ್ಯ ಕೀಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಾ.ನಾಗತಿಹಳ್ಳಿ ಚಂದ್ರಶೇಖರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next