ಚಿಕ್ಕಬಳ್ಳಾಪುರ: ಪ್ರತಿಯೊಬ್ಬರು ಜೀವದ ಜೊತೆಗೆ ಜೀವನ ನಡೆಸುವುದು ಮುಖ್ಯ ಆಗಿರುವುದರಿಂದ ನಾಲ್ಕನೇ ಹಂತದ ಲಾಕ್ ಡೌನ್ ಮೊದಲಿನಂತೆ ಇರುವುದಿಲ್ಲ. ಕೊರೊನಾ ಸಂಕಷ್ಟವನ್ನು ನಾವು ಇನ್ನೂ ಸೆಪ್ಪೆಂಬರ್‌ವರೆಗೂ ಎದುರಿಸಬೇಕಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಕೋವಿಡ್-19 ಪ್ರಯೋಗಾಲಯ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಲಾಕ್‌ಡೌನ್ ಪರಿಣಾಮ ಸತತ ಎರಡು ತಿಂಗಳಿಂದ ಎಲ್ಲ ವಲಯಗಳು ಬಂದ್ ಆಗಿದ್ದರಿಂದ ಇಡೀ ವಿಶ್ವ, ದೇಶ, ರಾಜ್ಯ ಆರು ತಿಂಗಳು ಹಿಂದಕ್ಕೆ ಹೋಗಿದೆ ಎಂದರು.
ಅಂತ್ಯವಾಗುವ ಲಕ್ಷಣ ಇಲ್ಲ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆ ಮಾಡಲಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ಕೊರೊನಾ ವೈರಾಣು ಅಂತ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ. ಅದರ ವಿರುದಟಛಿ ನಾವು ಹೋರಾಡುವ ಮೂಲಕ ಬದುಕಬೇಕೆಂದರು.
40 ಲ್ಯಾಬ್ ಸ್ಥಾಪನೆ: ಈ ಮೊದಲು ರಾಜ್ಯದಲ್ಲಿ ಕೊರೊನಾ ಪರೀಕ್ಷೆಗೆ ಕೇವಲ ಎರಡು ಲ್ಯಾಬ್ ಮಾತ್ರ ಇತ್ತು. ಎರಡು ತಿಂಗಳಲ್ಲಿ 40 ಲ್ಯಾಬ್ ಸ್ಥಾಪಿಸಲಾಗಿದೆ. ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ 60 ಲ್ಯಾಬ್ ಸ್ಥಾಪಿಸಲಾಗುವುದು. ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿ ಇದೆ. ಆರು ಸಾವಿರ ಮಂದಿಗೆ ಪರೀಕ್ಷೆ ನಡೆದಿದ್ದು, ಅದರಲ್ಲಿ ಕೇವಲ 24 ಪ್ರಕರಣಗಳು ಮಾತ್ರ ಪತ್ತೆಯಾಗಿವೆ ಎಂದರು.
ಕನ್ನಡಿಗರ ರಕ್ಷಣೆ ಮುಖ್ಯ: ದೇಶ, ವಿದೇಶಗಳಲ್ಲಿ ಇರುವರನ್ನು ಕರೆ ತರುತ್ತಿರುವುದಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಸತ್ಯ. ಕನ್ನಡಿಗರನ್ನು ರಕ್ಷಿಸುವುದು ಸರ್ಕಾರದ ಧರ್ಮ. ಕೊರೊನಾ ಸಂಕಷ್ಟ ರಾಜ್ಯದಲ್ಲಿ ಇನ್ನೂ ಎರಡು ತಿಂಗಳು ಇರುತ್ತದೆ. ಸೆಪ್ಪಂಬರ್ ವರೆಗೂ ನಾವು ಪರಿಸ್ಥಿತಿಯನ್ನು ನಿಭಾಯಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್. ಲತಾ, ಸಿಇಒ ಬಿ.ಫೌಝೀಯಾ ತರುನ್ನುಮ್, ಎಸ್ಪಿ ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ರಘುನಂದನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್ ಉಪಸ್ಥಿತರಿದ್ದರು.
ರಾಜ್ಯ ಕೋವಿಡ್-19 ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಆರಂಭದಲ್ಲಿ 2ನೇ ಸ್ಥಾನದಲ್ಲಿದ್ದ ಕರ್ನಾಟಕ ಇಂದು 13ನೇ ಸ್ಥಾನದಲ್ಲಿದೆ. 4ಟಿ ಮೂಲಕ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವರು