Advertisement

42 ಕೆಜಿ ಹಾಲು ನೀಡಿದ ಹಸು ಪ್ರಥಮ

12:12 PM Feb 06, 2017 | |

ಮೈಸೂರು: ಪಶುಪಾಲನಾ ಇಲಾಖೆ ಸಹಯೋಗದೊಂದಿಗೆ ಮೈಸೂರು ನಗರ ಗೋಪಾಲಕರ ಸಂಘ ದಿವಂಗತರಾದ ತೂಗುದೀಪ ಶ್ರೀನಿವಾಸ್‌, ರಾಕೇಶ್‌ ಸಿದ್ದರಾಮಯ್ಯ ಹಾಗೂ ನಟ ಲೋಕೇಶ್‌ ಸವಿನೆನಪಿಗಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ 42.200 ಕೇಜಿ ಹಾಲು ಕರೆದ ಬೆಂಗಳೂರಿನ ಚೌಡೇಶ್ವರಿ ಡೇರಿ ಫಾರಂನ ಸತೀಶ್‌ ಚೌಡಯ್ಯ ಅವರ ಹಸು ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿತು.

Advertisement

ಪ್ರಥಮ ಬಹುಮಾನವಾಗಿ 2 ಲಕ್ಷ ರೂ. ನಗದು, 2 ಕೇಜಿ ತೂಕದ ಬೆಳ್ಳಿದೀಪ ಹಾಗೂ ಪಾರಿತೋಷಕವನ್ನು ನಟ ದರ್ಶನ್‌ ವಿಜೇತ ಹಸುವಿನ ಮಾಲೀಕ ಸತೀಶ್‌ ಚೌಡಯ್ಯ ಅವರಿಗೆ ವಿತರಿಸಿದರು. 40.600 ಕೇಜಿ ಹಾಲು ಕರೆದ ಬೆಂಗಳೂರಿನ ಸೋಮಣ್ಣ ಅವರ ಹಸು 2ನೇ ಬಹುಮಾನ ತನ್ನದಾಗಿಸಿಕೊಂಡಿತು. 2ನೇ ಬಹುಮಾನಕ್ಕೆ 1 ಲಕ್ಷ ರೂ. ನಗದು, ಒಂದೂವರೆ ಕೆಜಿ ತೂಕದ ಬೆಳ್ಳಿದೀಪ ಹಾಗೂ ಪಾರಿತೋಷಕ ನೀಡಲಾಯಿತು.

39.900 ಕೇಜಿ ಹಾಲು ಕರೆದ ಮಂಡ್ಯ ಜಿಲ್ಲೆ ಪಂಪ್‌ಹೌಸ್‌ ಹೊಸಹಳ್ಳಿಯ ಹೊನ್ನೇಗೌಡ ಅವರ ಹಸು 3ನೇ ಬಹುಮಾನವನ್ನು ತನ್ನದಾಗಿಸಿಕೊಂಡಿತು. 75 ಸಾವಿರ ರೂ. ನಗದು, 1 ಕೇಜಿ ತೂಕದ ಬೆಳ್ಳಿದೀಪ ಹಾಗೂ ಪಾರಿತೋಷಕವನ್ನು 3ನೇ ಬಹುಮಾನವಾಗಿ ನೀಡಲಾಯಿತು. ಕಳೆದ ವರ್ಷ ಪ್ರಥಮ ಬಹುಮಾನ ಪಡೆದಿದ್ದ ಬೆಂಗಳೂರು ನಗರ ಜಿಲ್ಲೆ ಬೇಗೂರಿನ ಲಕ್ಷ್ಮಣ್‌ ಹೊಗೆಬಂಡಿ ಅವರ ಹಸು ಈ ವರ್ಷ 39.700 ಕೆಜಿ ಹಾಲು ಕರೆದು 4ನೇ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದು, 50 ಸಾವಿರ ರೂ. ನಗದು, ಅರ್ಧ ಕೆಜಿ ತೂಕದ ಬೆಳ್ಳಿದೀಪ ಹಾಗೂ ಪಾರಿತೋಷಕವನ್ನು ನೀಡಲಾಯಿತು.

39.300 ಕೆಜಿ ಹಾಲು ಕರೆದ ಬೆಂಗಳೂರಿನ ಚೌಡೇಶ್ವರಿ ಡೇರಿ ಫಾರಂನ ಚನ್ನಮ್ಮ ಅವರ ಹಸು ಐದನೇ ಬಹುಮಾನಕ್ಕೆ ಪಾತ್ರವಾಯಿತು. 30 ಸಾವಿರ ರೂ. ನಗದು, ಅರ್ಧ ಕೆಜಿ ಬೆಳ್ಳಿ ಹಾಗೂ ಪಾರಿತೋಷಕ ನೀಡಲಾಯಿತು. ಶುಕ್ರವಾರದಿಂದ ಮೂರು ದಿನಗಳ ಕಾಲ ನಗರದ ಜೆ.ಕೆ.ಮೈದಾನದಲ್ಲಿ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು.

ಶುಕ್ರವಾರ ಸಂಜೆ ಗೋಪೂಜೆಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸ್ಪರ್ಧೆಗೆ ಆಗಮಿಸಿದ್ದ ಹಸುಗಳನ್ನು ಜೆ.ಕೆ.ಮೈದಾನಕ್ಕೆ ಕರೆದೊಯ್ಯಲಾಯಿತು. ಶನಿವಾರ ಅಧಿಕ ಹಾಲುಕರೆಯುವ ಪೂರ್ವಭಾವಿ ಸ್ಪರ್ಧೆ ನಡೆಸಲಾಯಿತು. ಭಾನುವಾರ ನಡೆದ ಅಂತಿಮ ಸ್ಪರ್ಧೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ಅವಧಿಯಲ್ಲಿ ಕರೆದ ಹಾಲಿನ ತೂಕ ಪರಿಗಣಿಸಿ ಬಹುಮಾನ ನೀಡಲಾಯಿತು.

Advertisement

ಮೊದಲ ಎರಡು ಬಹುಮಾನಗಳನ್ನು ತಮ್ಮ ತಂದೆ ದಿ.ತೂಗುದೀಪ ಶ್ರೀನಿವಾಸ್‌ ಅವರ ಸವಿನೆನಪಿಗಾಗಿ ನಟ ದರ್ಶನ್‌ ಪ್ರಾಯೋಜಿಸಿದ್ದರು. 3ನೇ ಬಹುಮಾನವನ್ನು ತಮ್ಮ ತಂದೆ ದಿ.ಲೋಕೇಶ್‌ ಅವರ ಸವಿನೆನಪಿಗಾಗಿ ನಟ ಸೃಜನ್‌ ಲೋಕೇಶ್‌ ಪ್ರಾಯೋಜಿಸಿದ್ದರು. 4 ಮತ್ತು 5ನೇ ಬಹುಮಾನಗಳನ್ನು ಮೈಸೂರು ನಗರ ಗೋಪಾಲಕರ ಸಂಘದ ವತಿಯಿಂದ ನೀಡಲಾಯಿತು.

ಇದೇ ವೇಳೆ ಗೋಪಾಲಕರಾದ ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು. ನಟರಾದ ದರ್ಶನ್‌, ಸೃಜನ್‌ ಲೋಕೇಶ್‌, ಶಾಸಕ ಎಚ್‌.ಪಿ.ಮಂಜುನಾಥ್‌, ಸುನೀಲ್‌ ಬೋಸ್‌, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌, ಸಂಘದ ಗೌರವಾಧ್ಯಕ್ಷ ದೇಶೀಗೌಡ, ಅಧ್ಯಕ್ಷ ಡಿ.ನಾಗಭೂಷಣ್‌ ಸೇರಿದಂತೆ ಹಲವರು ಈ ವೇಳೆ ಹಾಜರಿದ್ದರು.

ಕಳೆದ 20 ವರ್ಷಗಳಿಂದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು, ಇದೇ ಮೊದಲ ಬಾರಿಗೆ ಪ್ರಥಮ ಮತ್ತು 5ನೇ ಬಹುಮಾನ ದೊರೆತಿರುವುದು ಸಂತಸ ತಂದಿದೆ. ಕಳೆದ ವರ್ಷ ತಮ್ಮ ಹಸು ಐದು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದರು, ಪ್ರಥಮ ಬಹುಮಾನ ಪಡೆಯಲಿಲ್ಲ ಎಂಬ ಕೊರಗಿತ್ತು. ಅದೀಗ ನೀಗಿದೆ. ಹಸು ಗರ್ಭಧರಿಸಿದ 7ನೇ ತಿಂಗಳಿನಿಂದಲೇ ಉತ್ತಮ ಆರೈಕೆಯೊಂದಿಗೆ ಹಸುವನ್ನು ಸ್ಪರ್ಧೆಗೆ ಅಣಿಗೊಳಿಸುತ್ತೇವೆ. ಬರ ಪರಿಸ್ಥಿತಿಯ ಈ ಸಂದರ್ಭದಲ್ಲಿ 5ರಿಂದ 10 ಹಸುಗಳನ್ನು ಸಾಕಿಕೊಂಡು ಜೀವನ ಸಾಗಿಸಬಹುದು. ದೊಡ್ಡ ಮಟ್ಟದಲ್ಲಿ ಡೈರಿಫಾರಂ ಮಾಡಿ ಹಸುಗಳನ್ನು ಸಾಕುವುದು ಕಷ್ಟದ ಕೆಲಸ.
-ಸತೀಶ್‌ ಚೌಡಯ್ಯ, ಪ್ರಥಮ ಬಹುಮಾನ ವಿಜೇತ ಹಸುವಿನ ಮಾಲಿಕ

ಸತತ 17 ವರ್ಷಗಳಿಂದ ರಾಜ್ಯ ಮಟ್ಟದ ಅಧಿಕ ಹಾಲು ಕರೆವ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಈ ವರ್ಷ 18 ಹಸುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
-ಡಿ.ನಾಗಭೂಷಣ್‌, ಅಧ್ಯಕ್ಷರು, ಮೈಸೂರು ನಗರ ಗೋಪಾಲಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next