Advertisement

411 ಕೋಟಿ ರೂ. ಮೊತ್ತದ ಬೀಳಗಿಯ ಅನವಾಲ ಏತ ನೀರಾವರಿ ಯೋಜನೆಗೆ ಸಂಪುಟ ಅನುಮೋದನೆ

05:55 PM Aug 12, 2022 | Team Udayavani |

ಬೆಂಗಳೂರು: ಬಾಗಲಕೋಟೆ ಜಿಲ್ಲೆ ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ  ಘಟಪ್ರಭಾ ಯೋಜನೆಯಡಿ 411.10 ಕೋಟಿ ರೂ. ಮೊತ್ತದ ಅನವಾಲ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ  ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಘಟಪ್ರಭಾ ಯೋಜನೆಯಡಿ, ಅನವಾಲ ಏತ ನೀರಾವರಿಯಲ್ಲಿ 3.64 ಟಿಎಂಸಿ ನೀರಿನ ಅವಶ್ಯಕತೆವಾಗಿದ್ದು, ಇದರ ಅನುಷ್ಠಾನದಿಂದ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ  ಮುರುಗೇಶ ಆರ್‌. ನಿರಾಣಿ ಅವರು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

“ಈ ನೀರಾವರಿ ಯೋಜನೆ ಕ್ಷೇತ್ರದ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದು, ನನ್ನ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸಲು ಬಯಸುತ್ತೇನೆ,” ಎಂದು ಹೇಳಿದ್ದಾರೆ.

ಡಾ. ನಂಜುಂಡಪ್ಪ ವರದಿಯ ಪ್ರಕಾರ ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಕೃಷ್ಣಾ ನದಿಯ ಹಿನ್ನೀರಿನಲ್ಲಿ  ಅತಿ ಹೆಚ್ಚು ಜಮೀನು ಹಾಗೂ ಗ್ರಾಮಗಳನ್ನು ಕಳೆದುಕೊಂಡ ಮುಳುಗಡೆ ಪ್ರದೇಶವಾಗಿರುತ್ತದೆ.  ಹೀಗಾಗಿ, ಅನವಾಲ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಬೇಕೆಂದು ಸಚಿವ ನಿರಾಣಿ ಮನವಿ ಮಾಡಿದ್ದರು.

ಈ  ಯೋಜನೆಯಡಿ ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಯು 199 ಕಿಲೋ ಮೀಟರ್ ಇದ್ದು  ಇದರಡಿ 16,9129 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಬಲದಂಡೆ ಮುಖ್ಯ ಕಾಲುವೆಯು 148 ಕಿ.ಲೋ ಮೀಟರ್‌ನಿಂದ 199 ಕಿಲೋಮೀಟರ್‌ವರೆಗೆ ನೀರು ತಲುಪದ ಕಾರಣ ಸುಮಾರು 24,750.00 ಹೆಕ್ಟೇರ್ ಜಮೀನು ನೀರಾವರಿ ಸೌಲಭ್ಯ ವಂಚಿತವಾಗಿವೆ. ಈ ಯೋಜನೆಗೆ  3.64 ಟಿಎಂಸಿ ನೀರಿನ ಅವಶ್ಯಕತೆ ಇರುತ್ತದೆ ಎಂದು ಸಿಎಂಗೆ  ಬರೆದ ಪತ್ರದಲ್ಲಿ ಸಚಿವ ನಿರಾಣಿ  ಉಲ್ಲೇಖಿಸಿದ್ದರು.

Advertisement

ಯೋಜನೆ ವಿವರ

ಈ ಯೋಜನೆಯಿಂದ  ಬೀಳಗಿ ಮತ್ತು ಬಾದಾಮಿ ವಿಧಾನಸಭಾ ಕ್ಷೇತ್ರದ 24,750 ಹೆಕ್ಟೇರ್ ಪೈಕಿ ಸುಮಾರು 14,525.43 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಲಭಿಸಲಿದೆ. ಬಾಗಲಕೋಟೆ ತಾಲೂಕಿನಲ್ಲಿ ಬರುವ ದೇವನಾಳು ಗ್ರಾಮದ ಹತ್ತಿರ ಅನವಾಲ  ಏತ ನೀರಾವರಿ ಯೋಜನೆ ಕಾರ್ಯಾರಂಭವಾಗಲಿದೆ.

ಕಳೆದ ವರ್ಷ ಜುಲೈ 6ರಂದು ನಡೆದ 84ನೇ ಅಂದಾಜು ಪರಿಶೀಲನಾ ಸಮಿತಿ ಸಭೆಯಲ್ಲಿ ಸಚಿವ ನಿರಾಣಿ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪ್ರಸ್ತಾವನೆಯನ್ನು  ಮಂಡಿಸಲಾಗಿತ್ತು. ಮಂಡಳಿಯ ಕೆಲವೊಂದು ಅಂಶಗಳನ್ನು ಅಳವಡಿಸಿಕೊಳ್ಳುವ ಷರತ್ತಿಗೊಳಪಡಿಸಿ  ಅನುಮೋದನೆ ಪಡೆಯಲು ಶಿಫಾರಸ್ಸು ಮಾಡಲಾಗಿತ್ತು.

2022ರ ಜನವರಿ 22 ರಂದು ನಡೆದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ 97ನೇ ಸಭೆಯಲ್ಲಿ 411.10 ಕೋಟಿ ರೂ. ಮೊತ್ತದ ಸದರಿ ಯೋಜನೆಯು ಎರಡು ಹಂತಗಳಲ್ಲಿ ಕೈಗೊಳ್ಳಲು ಅನುಮೋದನೆ ನೀಡಿತ್ತು.  ಅನವಾಲ ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಎರಡು ಹಂತಗಳಲ್ಲಿ ಕೈಗೊಳ್ಳುವಂತೆ ಸೂಚಿಸಿ, ಇದಕ್ಕೆ ಆಡಳಿತಾತ್ಮಕವಾಗಿ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next