ಜಮ್ಮು/ಅಗರ್ತಲಾ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಭಾನುವಾರ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಪಾಕ್ ಸೇನೆ ನಡೆಸಿದ ಶೆಲ್ ದಾಳಿಯಿಂದಾಗಿ ನಾಲ್ವರು ಯೋಧರು ಹುತಾತ್ಮರಾಗಿದ್ದು, 13 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಪೂಂಛ… ಮತ್ತು ರಜೌರಿ ಜಿಲ್ಲೆಯ ಗಡಿ ನಿಯತ್ರಣ ರೇಖೆಯಲ್ಲಿ ಈ ಘಟನೆ ನಡೆದಿದೆ.
ಶಾಹಪುರ ವಲಯದಲ್ಲಿ ಗಡಿಗ್ರಾಮಗಳು ಹಾಗೂ ಸೇನೆಯ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ರಾತ್ರಿಯವರೆಗೂ ಕಾರ್ಯಾಚರಣೆ ಮುಂದುವರಿದಿತ್ತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಜನವರಿ 18ರಿಂದ 22ರವರೆಗೆ ಪಾಕ್ ಪಡೆಯ ನಿರಂತರ ದಾಳಿಯಿಂದಾಗಿ 8 ಮಂದಿ ನಾಗರಿಕರು ಸೇರಿ 14 ಮಂದಿ ಮೃತಪಟ್ಟಿದ್ದು, ಸುಮಾರು 70 ಮಂದಿ ಗಾಯಗೊಂಡಿದ್ದರು. ಇದೀಗ ಮತ್ತೆ ಪಾಕ್ ಕ್ಯಾತೆ ಶುರುವಿಟ್ಟುಕೊಂಡಿದೆ.
ಪಾಕಿಸ್ತಾನವು ಅಪ್ರಚೋದಿತ ದಾಳಿ ನಡೆಸಿದರೆ ಲೆಕ್ಕವಿಲ್ಲದಷ್ಟು ಬುಲೆಟ್‌ಗಳಿಂದ ಅವರಿಗೆ ಪ್ರತ್ಯುತ್ತರ ನೀಡಿ ಎಂದು ಭದ್ರತಾಪಡೆಗಳಿಗೆ ಸೂಚಿಸಿದ್ದೇವೆ.
- ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ