Advertisement

ನೌಕರಿಯಲ್ಲಿ ವಿಕಲಚೇತನರಿಗೆ ಶೇ.4 ಮೀಸಲು

09:07 AM Dec 04, 2017 | |

ಬೆಂಗಳೂರು: ವಿಕಲಚೇತನರಿಗೆ ಸರ್ಕಾರಿ ನೌಕರಿ ಎ ಮತ್ತು ಬಿ ವರ್ಗದಲ್ಲಿ ಶೇ.4ರಷ್ಟು ಮೀಸಲಾತಿ ನೀಡಲಾಗುತ್ತಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.

Advertisement

ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ನಗರದ ಫ್ರೀಡಂ ಪಾರ್ಕ್‌ ಪೀಪಲ್‌ ಪ್ಲಾಜಾದ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಎಲ್ಲರಿಗಾಗಿ ಸಮಾಜವನ್ನು ಸುಸ್ಥಿರ ಹಾಗೂ ಚೇತೋಹಾರಿಯಾಗಿ ಪರಿವರ್ತಿಸೋಣ’ ಎಂಬುದು ಈ ಬಾರಿಯ ಘೋಷ ವಾಕ್ಯವಾಗಿದೆ. ಸರ್ಕಾರಿ ನೌಕರಿಯಲ್ಲಿ ಈ ಹಿಂದೆ ಎ-ಬಿ ದರ್ಜೆಯಲ್ಲಿ ಶೇ.3 ಮತ್ತು ಸಿ-ಡಿ ದರ್ಜೆಯಲ್ಲಿ ಶೇ.5ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಇದೀಗ ಎ-ಬಿ ದರ್ಜೆಯಲ್ಲಿ ವಿಕಲಚೇತನರಿಗೆ ರಾಜ್ಯ ಸರ್ಕಾರ ಶೇ.4ರಷ್ಟು ಮೀಸಲಾತಿ ನೀಡಿದೆ ಎಂದು ಹೇಳಿದರು.

ವಿಕಲಚೇತನರ ಇಲಾಖೆಯಿಂದ 2014-15ನೇ ಸಾಲಿನಲ್ಲಿ ಸಾವಿರ ಮೋಟರ್‌ ತ್ರಿಚಕ್ರ ಸೈಕಲ್‌ ವಿತರಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಹೊಸ ನಿಯಮದಿಂದಾಗಿ ತ್ರಿಚಕ್ರ ಸೈಕಲ್‌ನ ಮೋಟರ್‌ ಸಾಮರ್ಥ್ಯ ಹೆಚ್ಚಿಸಬೇಕಾಯಿತು. 2016-17ನೇ ಸಾಲಿನ ಟಾಕಿಂಗ್‌ ಲ್ಯಾಪ್‌ಟಾಪ್‌ ಮತ್ತು ಮೋಟರ್‌ ಸೈಕಲ್‌ಗ‌ಳನ್ನು ಫ‌ಲಾನುಭವಿಗಳಿಗೆ ವಿತರಿಸುವಲ್ಲಿ ತಡವಾಗಿದ್ದು, ಕೆಲವೇ ದಿನಗಳಲ್ಲಿ ಹಂಚಿಕೆ ಮಾಡಲಾಗುವುದು ಎಂದರು. 

ವಿಕಲಚೇತನರನ್ನು ಮದುವೆಯಾದರೆ ಸರ್ಕಾರ 50 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಇದೀಗ ಬೇಡಿಕೆಯ ಹಿನ್ನೆಲೆಯಲ್ಲಿ ಕಿವುಡರನ್ನು ಕಿವುಡರು, ಮಾತು ಬಾರದವರನ್ನು ಮಾತು ಬಾರದವರು ಮದುವೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಅವರಿಗೂ ಕೂಡ 50 ಸಾವಿರ ರೂ. ಪ್ರೋತ್ಸಾಹ ಧನ ಒದಗಿಸಲಾಗುವುದು. ಅಲ್ಲದೇ ಅಂಧ ವ್ಯಕ್ತಿಯನ್ನು ಅಂಧ ಮಹಿಳೆಗೆ
ವಿವಾಹವಾಗಿ ಮಗುವಾದರೆ, ಎರಡು ವರ್ಷಗಳ ಕಾಲ ಆ ಮಗುವನ್ನು ಪೋಷಿಸಲು ನೆರವಾಗುವ ಪೋಷಕರಿಗೆ ಪ್ರತಿ ತಿಂಗಳು 2 ಸಾವಿರ ರೂ. ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಬಿಬಿಎಂಪಿ ಸದಸ್ಯೆ ಲತಾ ನವೀನ್‌ಕುಮಾರ್‌, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್‌, ನಿರ್ದೇಶಕ ಸಿದ್ದರಾಜ್‌, ವಿಕಲನಚೇತರ ಪ್ರಶಸ್ತಿ ಆಯ್ಕೆ ಸಮಿತಿ
ಸದಸ್ಯರಾದ ಪುಟ್ಟಪ್ಪ, ಮುಕ್ತ ಮತ್ತಿತರರು ಉಪಸ್ಥಿತರಿದ್ದರು.

Advertisement

ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಂದಿ ವಿಕಲಚೇತನರಿಗೆ ಹಾಗೂ ನಿಮ್ಹಾನ್ಸ್‌ ಸೇರಿ 10 ಸಂಸ್ಥೆಗಳಿಗೆ ಮತ್ತು 5 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ವೇದಿಕೆ ಮುಂಭಾಗ ಪ್ರತಿಭಟನೆ
ವಿಕಲಚೇತನರಿಗೆ ಕೇವಲ 100 ಕಿ.ಮೀ. ಸಂಚರಿಸಲು ಬಸ್‌ಪಾಸ್‌ ನೀಡಲಾಗಿದೆ. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಇದು ನಿಗದಿಯಾಗಿದ್ದು, ನಂತರ ಪರಿಷ್ಕರಿಸಲಾಗಿಲ್ಲ. ಆದ್ದರಿಂದ ಕೂಡಲೇ 100 ಕಿ.ಮೀ. ಬದಲಿಗೆ 150 ಕಿ.ಮೀ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿ ಕೆಲ ವಿಕಲಚೇತನರು ವೇದಿಕೆಯ ಮುಂಭಾಗವೇ ಪ್ರತಿಭಟನೆ ಆರಂಭಿಸಿದರು. ಇದರಿಂದ ಕೆಲ ಕಾಲ ಗೊಂದಲ
ಸೃಷ್ಟಿಯಾಗಿತ್ತು. ಸಚಿವೆ ಉಮಾಶ್ರೀ ಮನವಿಯನ್ನು ಇಲಾಖೆಗೆ ಸಲ್ಲಿಸಿ, ಕ್ರಮಕೈಗೊಳ್ಳುತ್ತೇವೆ ಎಂದರೂ ಪ್ರತಿಭಟನೆ
ಮುಂದುವರಿಸಿದಾಗ ಪೊಲೀಸರು ಅವರನ್ನು ಹೊರಗೆ ಕಳುಹಿಸಿದ ಘಟನೆಯೂ ನಡೆಯಿತು. ಇದೇ ವೇಳೆ ವಿಕಲಚೇತನ ಕ್ರೀಡಾಪಟುಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

2016-17ನೇ ಸಾಲಿನಲ್ಲಿ ಎರಡು ಸಾವಿರವಿದ್ದ ವಿಕಲಚೇತರನ ಮೋಟರ್‌ ಸೈಕಲ್‌ ಗಳನ್ನು 2017-18ನೇ ಸಾಲಿನಲ್ಲಿ
4 ಸಾವಿರಕ್ಕೆ ಏರಿಕೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅದಕ್ಕಾಗಿ ಸುಮಾರು 28 ಕೋಟಿ ರೂ.ಗಳನ್ನು ಖರ್ಚು ಮಾಡಲಿದ್ದು, ಟೆಂಡರ್‌ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು.

 ●ಉಮಾಶ್ರೀ, ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next