ಬಂಟ್ವಾಳ: ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನ ಗೊಳಿಸಿದ್ದು, 2020-21ನೇ ಸಾಲಿಗೆ ತಾಲೂಕಿನಲ್ಲಿ 4,00,595 ಮಾನವ ದಿನಗಳ ಗುರಿಯನ್ನು ನೀಡಲಾಗಿದೆ. ಜೂ.25ರ ವರೆಗೆ ತಾಲೂಕಿನಲ್ಲಿ 65,016 ಮಾನವ ದಿನಗಳ ಕೆಲಸ ನಡೆದಿದೆ,
ತಾಲೂಕಿನಲ್ಲಿ ಒಟ್ಟು 16 ವಿಧದ ಒಟ್ಟು 674 ಕಾಮಗಾರಿಗಳು ಪ್ರಗತಿಯಲ್ಲಿವೆ. ಅದರಲ್ಲಿ 180 ಬಾವಿಗಳು, 5 ಕೃಷಿ ಹೊಂಡಗಳು, 215 ತೋಟಗಾರಿಕೆ, 126 ತೋಡುಗಳ ಹೂಳೆತ್ತುವಿಕೆ ಸಹಿತ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಜೂನ್ ತಿಂಗಳ ಅಂತ್ಯಕ್ಕೆ ತಾಲೂಕು 1,20,139 ಮಾನವ ದಿನಗಳ ಗುರಿಯನ್ನು ತಲುಪಬೇಕಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಶೇ. 54.12 ಪ್ರಗತಿಯನ್ನು ಸಾಧಿಸಿದೆ.
ಉದ್ಯೋಗ ಖಾತರಿ ಯೋಜನೆಯ ಮೂಲಕ ಹಲವು ಕಾಮಗಾರಿಗಳನ್ನು ನಡೆಸುವುದಕ್ಕೆ ಸರಕಾರ ಅವಕಾಶ ನೀಡಿದ್ದು, ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಮೂಲಕ ಒಗ್ಗೂಡುವಿಕೆಯ ಕಾರ್ಯಕ್ಕೂ ಅವಕಾಶವಿರುತ್ತದೆ. ಪ್ರತಿ ಗ್ರಾ. ಪಂ.ಗಳ ಮಾಹಿತಿಯ ಆಧಾರದಲ್ಲಿ ತಾಲೂಕಿನ ಪ್ರಗತಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ.
ಕೇಂದ್ರ ಸರಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್.ಆರ್.ಎಲ್.ಎಂ.) ಮೂಲಕ ಎಲ್ಲ ರೀತಿಯ ಸ್ವಸಹಾಯ ಸಂಘಗಳನ್ನು ಸೇರಿಕೊಂಡು ಉದ್ಯೋಗ ಖಾತರಿ ಮೂಲಕ ಹಲವು ಚಟುವಟಿಕೆಗಳನ್ನು ನಡೆಸುವುದಕ್ಕೆ ಅವಕಾಶವಿದ್ದು, ಕರ್ನಾಟಕ ರಾಜ್ಯದಲ್ಲಿ ಸಂಜೀವಿನಿ ಹೆಸರಿನ ಮೂಲಕ ಈ ಚಟುವಟಿಕೆ ನಡೆಯುತ್ತಿದೆ. ಬಂಟ್ವಾಳ ತಾಲೂಕಿನಲ್ಲಿ ಇದರ ಮೂಲಕವೂ ಹಲವು ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ವಾರ್ಡ್ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿ, ವಾರ್ಡ್‌ನವರು ಸೇರಿ ಗ್ರಾ.ಪಂ.ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸುತ್ತಾರೆ. ದ.ಕ. ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್., ಉಪ ಕಾರ್ಯದರ್ಶಿ ಆನಂದ್ ಕುಮಾರ್ ಹಾಗೂ ಯೋಜನ ನಿರ್ದೇಶಕ ಮಧುಕುಮಾರ್ ಅವರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ತಾ.ಪಂ. ಇಒ ರಾಜಣ್ಣ ಅವರ ನೇತೃತ್ವದಲ್ಲಿ ಉದ್ಯೋಗ ಖಾತರಿಯ ಯೋಜನೆಗಳು ನಡೆಯುತ್ತಿವೆ.
65,016 ಮಾನವ
ದಿನಗಳು ಪೂರ್ಣ
ತಾಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟು ಗುರಿಗಳ ಪೈಕಿ ಜೂ.25ಕ್ಕೆ 65,016 ಮಾನವ ದಿನಗಳ ಕಾಮಗಾರಿ ನಡೆದಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮೂಲಕ ಸಂಜೀವಿನಿ ಯೋಜನೆಯಲ್ಲಿ ಸ್ವಸಹಾಯ ಸಂಘಗಳ ಒಗ್ಗೂಡುವಿಕೆಯಲ್ಲೂ ಕೆಲಸಗಳು ನಡೆಯುತ್ತಿವೆ.
– ಪ್ರಶಾಂತ್ ಬಳಂಜ, ಸಹಾಯಕ ನಿರ್ದೇಶಕರು, ತಾ.ಪಂ.